

ಕಡಬೂರು: ನಗರಗೆರೆಯಲ್ಲಿ ಶಿಥಿಲಗೊಂಡಿರುವ ಓವರ್‌ಹೆಡ್ ಟ್ಯಾಂಕ್ ಈಗಲೋ ಆಗಲೋ ಕುಸಿಯುವ ಹಂತ ತಲುಪಿದ್ದು, ಕೂಡಲೇ ತೆರವುಗೊಳಿಸಿ, ಮುಂದಾಗುವ ಅನಾಹುತ ತಪ್ಪಿಸಬೇಕಿದೆ.
ಪರಿಶಿಷ್ಟರೇ ಹೆಚ್ಚು ವಾಸವಿರುವ ಗ್ರಾಮದ ಪ್ರದೇಶದಲ್ಲಿ ಈ ಹಿಂದೆ ನಿರ್ಮಿಸಿದ್ದ ಸುಮಾರು 30 ಸಾವಿರ ಲೀಟರ್ ಸಾಮರ್ಥ್ಯದ ಓವರ್ ಟ್ಯಾಂಕ್ ಬಿರುಕು ಬಿಟ್ಟಿದ್ದು, ನೀರು ಸೋರಿಕೆಯಾಗುತ್ತಿದೆ. ಸೋರುವ ನೀರು ರಸ್ತೆಗೆ ಹರಿದು ಪಾಚಿ ಕಟ್ಟಿದ್ದು, ಜನ ಸಂಚಾರಕ್ಕೆ ಸಮಸ್ಯೆಯಾಗಿದೆ. ಜತೆಗೆ ಟ್ಯಾಂಕ್‌ನ ಪಕ್ಕದಲ್ಲೇ ಕುಟುಂಬವೊಂದು ಆಶ್ರಯಪಡೆದಿದ್ದು, ಈಗ ಸೋರುವ ನೀರಿನ ನಡುವೆಯೇ ಬದುಕು ದೂಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಣೆಗೆ ನಿರ್ಲಕ್ಷ್ಯ ತೋರಿರುವುದರಿಂದ ಟ್ಯಾಂಕ್ ಅಪಾಯದ ಸ್ಥಿತಿಯಲ್ಲಿದೆ. ಟ್ಯಾಂಕ್ ಸಂಪೂರ್ಣ ಬಿರುಕು ಬಿಟ್ಟು ನೀರು ಸೋರುತ್ತಿದೆ ಮತ್ತು ಅಡಿಪಾಯವೂ ಬಿರುಕು ಬಿದ್ದಿದೆ, ಯಾವಾಗ ಬೇಕಾದರೂ ಕುಸಿಯುವ ಹಂತದಲ್ಲಿದೆ.
ಯೋಗ್ಯವಲ್ಲದ ನೀರು
ಟ್ಯಾಂಕ್ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿ ಸಾಕಾಗಿಹೋಗಿದೆ. ಒಂದಲ್ಲ ಒಂದು ಸಬೂಬು ಹೇಳುತ್ತಾರೆ. ಟ್ಯಾಂಕಿಗೆ ಸುಮ್ಮನೆ ನೀರು ತುಂಬಿಸುತ್ತಾರೆ. ಟ್ಯಾಂಕ್ ಶಿಥಿಲಗೊಂಡು ವಿಷಜಂತುಗಳು, ಕ್ರಿಮಿಕೀಟಗಳು ಬಿದ್ದು ನೀರು ದುರ್ವಾಸನೆಯಿಂದ ಕೂಡಿದೆ. ಟ್ಯಾಂಕ್‌ನ ಮೇಲೆ ಗಿಡಗಳು ಬೆಳೆಯುತ್ತಿವೆ. ಈ ನೀರನ್ನು ಗ್ರಾಮದಲ್ಲಿ ಯಾರೂ ಕುಡಿಯುವುದಿಲ್ಲ ಎನ್ನುತ್ತಾರೆ ಸ್ಥಳೀಯರು.
ದುರ್ವಾಸನೆ, ಕ್ರಿಮಿಕೀಟ ವಿಪರೀತ
ಟ್ಯಾಂಕ್‌ನಿಂದ ಸೋರುವ ನೀರು ರಸ್ತೆಗೆ ಹರಿಯುವುದರಿಂದ ಜನ ಸಂಚಾರ ಜಾಗದಲ್ಲಿ ಪಾಚಿ ಕಟ್ಟಿ ಚಿಕ್ಕಮಕ್ಕಳು ಜಾರಿ ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ನಾನು ಕೂಡ ಜಾರಿಬಿದ್ದು ಕಾಲು ಮುರಿದುಕೊಂಡಿದ್ದೆ. ಸಮಸ್ಯೆಯನ್ನು ಪಂಚಾಯಿತಿ ಗಮನಕ್ಕೆ ತಂದರೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಉಡಾೆಯಾಗಿ ಮಾತನಾಡುತ್ತಾರೆ ಎಂದು ಅಂಜಕ್ಕ ಅಳಲು ತೋಡಿಕೊಂಡಿದ್ದಾರೆ.
"ನಗರಗೆರೆ ಪಂಚಾಯಿತಿಯಲ್ಲಿ ಪಿಡಿಒ ನಿರ್ಲಕ್ಷ್ಯದಿಂದಾಗಿ ಯಾವುದೇ ಕೆಲಸ ಆಗುತ್ತಿಲ್ಲ. ಅಧ್ಯಕ್ಷರು ಮತ್ತು ಸದಸ್ಯರಿಗೆ ಗೌರವ ನೀಡುವುದಿಲ್ಲ, ಜನರ ಕಷ್ಟಕ್ಕೆ ಸ್ಪಂದಿಸುವುದಿಲ್ಲ. ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಪಂಚಾಯಿತಿ ಪೂರಕವಾಗಿಲ್ಲ." - ಲಕ್ಷ್ಮೀನಾರಾಯಣ ಗ್ರಾಪಂ ಸದಸ್ಯ "ಈ ಸಮಸ್ಯೆ ಇದುವರೆಗೂ ಗಮನಕ್ಕೆ ಬಂದಿಲ್ಲ. ಪಂಚಾಯಿತಿ ಮಟ್ಟದಲ್ಲಿ ಕುಡಿಯುವ ನೀರಿಗೆ ಆದ್ಯತೆ ಕೊಡುವುದು ಆದ್ಯ ಕರ್ತವ್ಯ. ಟ್ಯಾಂಕ್ ಶಿಥಿಲಗೊಂಡಿರುವುದು ಆರ್‌ಡಬ್ಲುೃಎಸ್ ಇಲಾಖೆಗೆ ಬರುತ್ತದೆ. ಕುಡಿಯುವ ನೀರಿಗೆ ಸಮಸ್ಯೆ ಆಗಿರುವುದರಿಂದ ಪಂಚಾಯಿತಿಯಲ್ಲಿ ಹಣವಿದ್ದರೆ ಕೂಡಲೇ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ಇಲ್ಲದಿದ್ದರೆ ಸರ್ಕಾರಕ್ಕೆ ಪತ್ರ ಬರೆದು ಹಣ ಬಂದ ತಕ್ಷಣ ನೀರಿನ ಸೋರುವಿಕೆ ಹಾಗೂ ಟ್ಯಾಂಕ್ ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು." - ಹೊನ್ನಯ್ಯ ತಾಪಂ ಇಒ