

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ, ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗೂ ಇದೀಗ ಡೀಪ್ ಫೇಕ್ ಸಂಕಷ್ಟ ಎದುರಾಗಿದ್ದು, ತಾವೇ ಒಂದು ಆ್ಯಪ್ ಕುರಿತಂತೆ ಪ್ರಚಾರ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಡೀಪ್ ಫೇಕ್ ದೃಶ್ಯಕ್ಕೆ ಪ್ರತಿಕ್ರಿಯಿಸಿರುವ ಸಚಿನ್, ಇದು ಎಷ್ಟು ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಸಿದ್ದಾರೆ.
ತಮ್ಮ ಮುಖವನ್ನು ಹೋಲುವಂತ ಡೀಪ್ ಫೇಕ್ ವಿಡಿಯೋ ನೋಡಿದ ಸಚಿನ್, ಕೂಡಲೇ ಅದನ್ನು ರಿಪೋರ್ಟ್ ಮಾಡಿದ್ದು, ಈ ಬಗ್ಗೆ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಮಾರ್ಫ್ ಮಾಡಲಾದ ವೀಡಿಯೊದಲ್ಲಿ ತೆಂಡೂಲ್ಕರ್ ಅವರು ತಮ್ಮ ಮಗಳು ಸಾರಾ ಕೂಡ ಇತ್ತೀಚಿನ ದಿನಗಳಲ್ಲಿ ಈ ಆ್ಯಪ್ ಬಳಸುತ್ತಿದ್ದಾರೆ ಮತ್ತು ಸಾಕಷ್ಟು ಹಣವನ್ನು ಗಳಿಸುತ್ತಿದ್ದಾರೆ ಎಂದು ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ.
ವೀಡಿಯೋದಲ್ಲಿ ತೆಂಡೂಲ್ಕರ್ ಅವರ ಧ್ವನಿ ಮತ್ತು ಮುಖವನ್ನು ಮಾರ್ಫ್ ಮಾಡಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಈ ವೀಡಿಯೊವನ್ನು ಎಲ್ಲರ ಗಮನಕ್ಕೆ ತಂದ ಸಚಿನ್, ಇಂತಹ ವಿಡಿಯೋಗಳು ಆನ್‌ಲೈನ್‌ನಲ್ಲಿ ನಿಮ್ಮ ಗಮನಕ್ಕೆ ಬಂದರೆ ಕೂಡಲೇ ವರದಿ ಮಾಡುವಂತೆ ಹೇಳಿದ್ದಾರೆ.
"ಈ ವೀಡಿಯೊಗಳು ನಕಲಿ. ತಂತ್ರಜ್ಞಾನದ ಅತಿರೇಕದ ದುರುಪಯೋಗವನ್ನು ನೋಡುವುದು ತುಂಬ ಗೊಂದಲದ ಸಂಗತಿಯಾಗಿದೆ. ಈ ರೀತಿಯ ವೀಡಿಯೊಗಳು, ಜಾಹೀರಾತುಗಳು ಮತ್ತು ಅಪ್ಲಿಕೇಶನ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವರದಿ ಮಾಡಿ" ಎಂದು ಸಚಿನ್ ಪ್ರತಿಯೊಬ್ಬರಿಗೂ ಮನವಿ ಮಾಡಿದ್ದಾರೆ.
ಈ ಹಿಂದೆಯೂ ಇದೇ ರೀತಿಯ ಡೀಪ್ ಫೇಕ್ ತಮ್ಮ ಮಗಳು ಸಾರಾ ಅವರಿಗೆ ಎದುರಾಗಿತ್ತು. ಸಾರಾ ತೆಂಡೂಲ್ಕರ್ ಮತ್ತು ಕ್ರಿಕೆಟಿಗ ಶುಭಮನ್ ಗಿಲ್ ಜತೆಗಿರುವ ನಕಲಿ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಮೂಲಕ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು. ಆದ್ರೆ, ಅದು ಡೀಪ್ ಫೇಕ್ ಕೈವಾಡ ಎಂಬುದು ಸ್ಪಷ್ಟವಾಯಿತು. ಬಾಲಿವುಡ್ ನಟರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಆಲಿಯಾ ಭಟ್, ಕಾಜೋಲ್ ಮುಂತಾದವರು ಕೂಡ ಈ ಡೀಪ್ ಫೇಕ್ಗೆ ತುತ್ತಾಗಿದ್ದಾರೆ,(ಏಜೆನ್ಸೀಸ್).