ಸ್ಥಾಪನಾ ದಿನ ಇದ್ರೇನಂತೆ? ಅಜ್ಜಿ ನೋಡೋಕೆ ಹೋಗಿರ್ಬೋದು... ಎಲ್ಲಾದಕ್ಕೂ ಕಾರಣ ಕೊಡೋಕಾಗತ್ತಾ?

rahul gandhi
Published on

ನವದೆಹಲಿ: ಇತ್ತ ಕಾಂಗ್ರೆಸ್​ ಸ್ಥಾಪನಾ ದಿನ ಇದ್ದಂತೆ ಅತ್ತ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಇಟಲಿ ಪ್ರಯಾಣ ಬೆಳೆಸಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್​ ಆಗುತ್ತಿದೆ. ಅವರು ತಮ್ಮ ಪಕ್ಷದ ಮುಖಂಡರಿಗೇ ಈ ಹಿಂದಿನಂತೆ ಕಾರಣ ನೀಡದೇ ಇರುವುದು ಪಕ್ಷದವರನ್ನು ಇರುಸುಮುರುಸುಗೊಳಿಸಿದೆ.

ಅತ್ತ ಇಟಲಿಯಲ್ಲಿ ಕರೊನಾ ಲಸಿಕೆ ಶುರುವಾದ ತಕ್ಷಣ ಇತ್ತ ರಾಹುಲ್​ ಗಾಂಧಿ ಇಟಲಿಗೆ ಹಾರಿರಬಹುದು ಎಂದು ಹೇಳಲಾಗುತ್ತಿದೆ. ಇಟಲಿಯ ಮೂವರು ಆರೋಗ್ಯ ಕಾರ್ಯಕರ್ತರಿಗೆ ಇದಾಗಲೇ ಕರೊನಾ ಲಸಿಕೆ ನೀಡಲಾಗಿದೆ. ಫೈಜರ್ ಹಾಗೂ ಬಯೋ ಎನ್‌ ಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಇಟಲಿಯಲ್ಲಿ ನೀಡಲಾಗುತ್ತಿದೆ. ಮೊದಲ ಹಂತದಲ್ಲಿ 60 ದಶಲಕ್ಷ ಇಟಲಿ ಪ್ರಜೆಗಳಿಗೆ ಇದನ್ನು ನಿರ್ಧರಿಸಲಾಗಿದೆ.

ಇದರ ಬೆನ್ನಲ್ಲೇ ರಾಹುಲ್​ ಗಾಂಧಿ ಇಟಲಿಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಒಬ್ಬೊಬ್ಬರು ಒಂದೊಂದು ತೆರನಾದ ಕಾರಣ ನೀಡುತ್ತಿದ್ದಾರೆ.

ಯಾವುದಕ್ಕೂ ಉತ್ತರಿಸಲಾಗದ ಸ್ಥಿತಿಯಲ್ಲಿ ಕೈ ಧುರೀಣರು ಇದ್ದಾರೆ. ರೈತರ ಸಲುವಾಗಿ ಜಾರಿಗೊಳಿಸಿರುವ ಕಾನೂನನ್ನು ತಾವೂ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿ, ಈಗ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಟ್ರೋಲ್​ ಆಗುತ್ತಿದ್ದ ರಾಹುಲ್​ ಗಾಂಧಿಯವರನ್ನು ಈಗ ವಿದೇಶ ಪ್ರಯಾಣ ಪೇಚಿಗೆ ಸಿಲುಕಿಸಿದೆ.

ರಾಹುಲ್​ ಗಾಂಧಿ ಮತ್ತು ಸೋನಿಯಾ ಗಾಂಧಿ ಈ ಹಿಂದೆಯೂ ಅನೇಕ ಬಾರಿ ಪಕ್ಷದ ಕಾರ್ಯಕರ್ತರ ಜತೆ ಚರ್ಚಿಸದೇ ಇಟಲಿ ಸೇರಿದಂತೆ ಹಲವಾರು ದೇಶಗಳಿಗೆ ಹೋಗಿದ್ದು ಇದೆ. ಆದರೆ ಇದೀಗ ರೈತರ ಪ್ರತಿಭಟನೆಯ ವೇಳೆ, ಅದರಲ್ಲಿಯೂ ತಮ್ಮದೇ ಪಕ್ಷದ ಸ್ಥಾಪನಾ ದಿನ ಇರುವ ಸಂದರ್ಭದಲ್ಲಿ ಹೋಗಿರುವುದಕ್ಕೆ ಕೇಳಿರುವ ಪ್ರಶ್ನೆಗೆ ಕಾಂಗ್ರೆಸ್​ ಮುಖಂಡರ ಬಳಿ ಉತ್ತರವಿಲ್ಲ.

ಇದಕ್ಕೆ ಕೇಳಿದ ಪ್ರಶ್ನೆಗೆ ಗರಂ ಆದ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​, ಇಟಲಿಯಲ್ಲಿ ರಾಹುಲ್​ ಗಾಂಧಿಯವರ ಅಜ್ಜಿ ಇದ್ದು, ಅವರನ್ನು ನೋಡಲು ಹೋಗಿರಬಹುದು. ಇದರಲ್ಲಿ ತಪ್ಪೇನಿದೆ? ಕಾಂಗ್ರೆಸ್​ ಸ್ಥಾಪನಾ ದಿನ ಇದ್ದರೇನಂತೆ? ಅಜ್ಜಿಯನ್ನು ನೋಡಲು ಹೋಗುವುದು ತಪ್ಪಾ? ಅವರು ಖಾಸಗಿಯಾಗಿ ಹೋಗಿದ್ದಾರೆ. ಎಲ್ಲವನ್ನೂ ಎಲ್ಲರಿಗೂ ಹೇಳಿ ಹೋಗಲು ಆಗುತ್ತದೆಯಾ ಎಂದು ಪ್ರಶ್ನಿಸಿದ್ದಾರೆ.

ಇದೀಗ ಇವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net