ಮಗ ಹುಟ್ಟುತ್ತಲೇ ವಿಚಿತ್ರ ಅನುಭವ: ಮಂತ್ರವಾದಿ ನೀಡಿದ ಚಿಕಿತ್ಸೆ- ಮುಂದೆ ಆದದ್ದು ಭಯಾನಕ!

mantrika
Published on

ಸಿಂಗ್ರೌಲಿ (ಮಧ್ಯಪ್ರದೇಶ): ಭೋಪಾಲ್‌ನಿಂದ ಪೂರ್ವಕ್ಕೆ 780 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಮಹಿಳೆ ಗುಡ್ಡಿ ಸಿಂಗ್ ಗೊಂಡ್ (27) ಮೂರು ಹೆಣ್ಣುಮಕ್ಕಳ ತಾಯಿ. ಅಲ್ಲಿಯವರೆಗೆ ತನ್ನ ಕುಟುಂಬದ ಜತೆ ಚೆನ್ನಾಗಿಯೇ ಇದ್ದಾಕೆಗೆ ನಾಲ್ಕನೆಯ ಮಗು ಹುಟ್ಟಿದ್ದು ಗಂಡು.

ಮೂವರು ಹೆಣ್ಣುಮಕ್ಕಳ ನಂತರ ಮಗ ಹುಟ್ಟಿದ ಎಂದು ಮೊದಲಿಗೆ ತುಂಬಾ ಖುಷಿಯಾಗಿದ್ದ ಗುಡ್ಡಿ ನಂತರ ತನಗೆ ವಿಚಿತ್ರ ಅನುಭವ ಆಗುತ್ತಿದೆ ಎಂದು ಹೇಳತೊಡಗಿದ್ದಾಳೆ. ಮೈಮೇಲೆ ಬಂದವರಂತೆ ವರ್ತಿಸತೊಡಗಿದ್ದಾಳೆ. ನಂತರ ಮನೆಯಲ್ಲಿ ಹೇಳದೇ ಮಾಂತ್ರಿಕನ ಮೊರೆ ಹೋಗಿದ್ದಾಳೆ. ತನಗಾಗುತ್ತಿರುವ ಚಿತ್ರ ವಿಚಿತ್ರ ಅನುಭವದ ಕುರಿತು ಯಾರಾದರೂ ವೈದ್ಯರ ಬಳಿ ಸಲಹೆ ಕೇಳು ಎಂದು ಕೆಲವರು ಹೇಳಿದರೂ, ಆಕೆ ಹೋದದ್ದು ಮಾಂತ್ರಿಕನ ಬಳಿ.

ಆ ಮಾಂತ್ರಿಕ ಬಳಿ ಹೋಗಿ ಸೀದಾ ಮನೆಗೆ ಬಂದವಳೇ ತನ್ನ ಐದು ತಿಂಗಳ ಮಗುವಿಗೆ ಬೆಂಕಿ ಇಟ್ಟು ಕೊಂದೇ ಬಿಟ್ಟಿದ್ದಾಳೆ!

ಪೊಲೀಸರು ಬಂದು ವಿಚಾರಿಸಿದಾಗ ತೀರಾ ವಿಚಿತ್ರವಾಗಿ ವರ್ತಿಸಿದ ಆಕೆ, ಮಗ ತುಂಬಾ ಅಳುತ್ತಿದ್ದ. ಸುಮ್ಮನೆ ಉಳಿಯುತ್ತಿರಲಿಲ್ಲ. ಆದ್ದರಿಂದ ಸಹಿಸಲು ಆಗದೇ ಕೊಂದೆ ಎಂದು ಉತ್ತರ ಕೊಟ್ಟಿದ್ದಾಳೆ!

ಆದರೆ ಆಕೆಯ ಮಾವ, ಶ್ರೀಪಾಲ್ ಸಿಂಗ್ ತನ್ನ ಸೊಸೆ ಗುಡ್ಡಿ ತನ್ನ ಮೊಮ್ಮಗ ಸಂದೀಪ್ ಗೊಂಡ್‌ಗೆ ಬೆಂಕಿ ಹಚ್ಚಿ ಕೊಂದಿದ್ದಾಳೆ ಎಂದು ದೂರು ದಾಖಲು ಮಾಡಿದ್ದಾರೆ. ಆದರೆ ಆಗ ಆಕೆ ವಿಚಿತ್ರವಾಗಿ ವರ್ತಿಸುತ್ತಿದ್ದಳು. ಸ್ವಲ್ಪ ಸಮಯದ ನಂತರವಷ್ಟೇ ಆಕೆಗೆ ತಾನು ಮಾಡಿರುವ ಕೃತ್ಯ ತಿಳಿದಿದೆ ಎಂದಿದ್ದಾರೆ.

ತನಿಖೆ ಕೈಗೊಂಡ ಪೊಲೀಸರಿಗೆ ಮಹಿಳೆ ಮಾಂತ್ರಿಕನ ಬಳಿ ಹೋದದ್ದು ತಿಳಿದಿದೆ. ಈಕೆ ಮಾಂತ್ರಿಕನ ಬಳಿ ಹೋದಾಗ ಆತ ಈಕೆಗೆ ಏನೋ ಮಾಡಿದ್ದು, ಅವಳಿಗೆ ಗೊತ್ತಿಲ್ಲದೇ ಮಗುವನ್ನು ಕೊಂದಿದ್ದಾಳೆ ಎಂದಿದ್ದಾರೆ ಕುಟುಂಬದವರು. ಮಾಂತ್ರಿಕ ತನ್ನ ಅತೀಂದ್ರಿಯ ಶಕ್ತಿ ವೃದ್ಧಿಸಲು ಮಹಿಳೆಯ ಕೈಯಲ್ಲಿ ಹೀಗೆ ಮಾಡಿಸಿದ್ದಾನೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದಿದ್ದಾರೆ ಪೊಲೀಸರು.

ಸದ್ಯ ಆತನ ಹುಟುಕಾಟದಲ್ಲಿ ತೊಡಗಿದ್ದಾರೆ ಪೊಲೀಸರು. ಮಗುವಿನ ಸುಟ್ಟ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net