ಕೆಲಸದ ಒತ್ತಡ ತಾಳಲಾಗುತ್ತಿಲ್ಲ... ಸಾಯದೇ ದಾರಿ ಇಲ್ಲ... ಡೆತ್​ನೋಟ್​ ಬರೆದು ಬ್ಯಾಂಕ್​ ಮ್ಯಾನೇಜರ್​ ಆತ್ಮಹತ್ಯೆ

suicide
Published on

ತಿರುವನಂತಪುರ: ರಾಷ್ಟ್ರೀಕೃತ ಬ್ಯಾಂಕ್​ ಒಂದರಲ್ಲಿ ಮ್ಯಾನೇಜರ್​ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಕೆಲಸದ ಒತ್ತಡದ ಕಾರಣ ನೀಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಕುಥುಪರಂಬರದಲ್ಲಿ ನಡೆದಿದೆ.

ಸ್ವಪ್ನಾ ಎನ್ನುವ 38 ವರ್ಷದ ಮಹಿಳೆ, ಇಬ್ಬರು ಮಕ್ಕಳ ತಾಯಿ ಇಂಥದ್ದೊಂದು ಹಾದಿ ಹಿಡಿದಿದ್ದಾರೆ. ಸಾಯುವ ಮುನ್ನ ಡೆತ್​ನೋಟ್​ ಬರೆದಿರುವ ಸ್ವಪ್ನಾ, ನನಗೆ ಕೆಲಸದ ಒತ್ತಡ ತಡೆಯಲಾಗುತ್ತಿಲ್ಲ. ಆದ್ದರಿಂದ ಹೀಗೆ ಮಾಡಿಕೊಂಡಿದ್ದೇನೆ ಎಂದು ಬರೆದಿದ್ದಾರೆ.

ಸ್ವಪ್ನಾ ಅವರಿಗೆ ಕಳೆದ ವರ್ಷ ಸೆಪ್ಟೆಂಬರ್​ನಲ್ಲಿ ಕುಥುಪರಂಬರ ಶಾಖೆಗೆ ವರ್ಗಾವಣೆಯಾಗಿತ್ತು. ಇಲ್ಲಿ ಕೆಲಸದ ಒತ್ತಡ ಹೆಚ್ಚಾಗಿರುವ ಕಾರಣ, ನನಗೆ ಅದನ್ನು ಸಹಿಸಲು ಆಗುತ್ತಿಲ್ಲ ಎಂದು ಡೆತ್​ನೋಟ್​ನಲ್ಲಿ ಇದೆ. ಬ್ಯಾಂಕ್​ನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಇವರು ಶರಣಾಗಿದ್ದಾರೆ. ಇದನ್ನು ನೋಡಿದ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನ ಆಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಕೇವಲ ಕೆಲಸದ ಒತ್ತಡದಿಂದ ಇವರು ಇಂಥ ಹಾದಿ ತುಳಿದಿದ್ದಾರೋ ಅಥವಾ ಆತ್ಮಹತ್ಯೆಯ ಹಿಂದೆ ಇನ್ನೇನು ಕಾರಣಗಳು ಇವೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net