

ಅಡುಗೆ ಮಾಡುವುದು ಒಂದು ಬಲುದೊಡ್ಡ ಕಲೆ. ಆದರೆ ಅದೆಷ್ಟೇ ಎಚ್ಚರಿಕೆಯಿಂದ ಅಡುಗೆ ಮಾಡಿದರೂ ಒಮ್ಮೊಮ್ಮೆ ಅದು ಹದಗೆಡುವುದುಂಟು. ಅಡುಗೆ ಪದಾರ್ಥಗಳನ್ನು ಜೋಪಾನದಿಂದ ಇಟ್ಟುಕೊಂಡರೂ ಕೆಲವು ಸಲ ಅವು ಹಾಳಾಗುವುದುಂಟು. ಆದ್ದರಿಂದ ಅಡುಗೆ ಮನೆಯ ಕೆಲವು ಟಿಪ್ಸ್ ಅರಿತಿರುವುದು ತುಂಬಾ ಒಳ್ಳೆಯದು.
* ಸಾರಿಗೆ ಉಪ್ಪು ಹೆಚ್ಚಾಯಿತೆ? ಚಿಂತೆ ಬಿಡಿ. ಕಬ್ಬಿಣದ ಸೌಟನ್ನು ಒಲೆಯ ಮೇಲಿಟ್ಟು ಅದು ಕೆಂಪಗಾದ ಮೇಲೆ ಸಾರಿನಲ್ಲಿ ಅದ್ದಿದರೆ ಉಪ್ಪು ಸರಿಯಾಗುತ್ತದೆ.
* ಪುಳಿಯೊಗರೆ, ಚಿತ್ರಾನ್ನ, ವಾಂಗೀಬಾತ್ ಮಾಡಲು ಅನ್ನ ಉದುರಾಗಿರಲು ಅನ್ನ ಮಾಡುವಾಗ ಸ್ವಲ್ಪ ಎಣ್ಣೆ ಅಥವಾ ನಿಂಬೆರಸ ಹಾಕಿದರೆ ಅನ್ನ ಬಿಡಿಬಿಡಿಯಾಗಿ ಹದವಾಗಿ ಆಗುತ್ತದೆ.
* ಮಸಾಲೆ ಅಥವಾ ಕೊಬ್ಬರಿ ರುಬ್ಬುವಾಗ ಸ್ವಲ್ಪ ಉಪ್ಪು ಹಾಕಿದರೆ ಕೊಬ್ಬರಿ ಬೇಗ ನುಣ್ಣಗಾಗುತ್ತದೆ ಮತ್ತು ಮೈ ಮೇಲೆ ಸಿಡಿಯುವುದಿಲ್ಲ.
* ಪಲಾವ್ ಮಾಡುವ ಮೊದಲು ಬಾಸುಮತಿ ಅಕ್ಕಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟು ನೀರು ಬಸಿದು ಮೂರ್ನಾಲ್ಕು ನಿಮಿಷ ಹಾಗೆಯೇ ಬಿಟ್ಟು ನಂತರ ಪಲಾವ್ ಮಾಡಿದರೆ ಅನ್ನ ಮುದ್ದೆಯಾಗದೇ ಉದುರುದುರಾಗಿರುತ್ತದೆ.
* ಅಕ್ಕಿಯನ್ನು ತೊಳೆದು ಬೇಯಿಸಲು ಇಡುವ ಮೊದಲು ಚಿಟಿಕೆ ಎಣ್ಣೆ ಹಾಕಿದರೆ ಅನ್ನ ಮುದ್ದೆಯಾಗುವುದಿಲ್ಲ.
* ಗ್ಯಾಸ್ ಸ್ಟೋವ್, ಮಿಕ್ಸರ್, ಗ್ರೈಂಡರ್, ಓವೆನ್ ಇತ್ಯಾದಿಗಳನ್ನು ಸ್ವಚ್ಛ ಮಾಡುವಾಗ ಸ್ಕ್ರಬïಗೆ ಸ್ವಲ್ಪ ಅಡುಗೆ ಸೋಡ ಹಾಕಿದರೆ ಹೊಳಪು ಬರುತ್ತದೆ.
*ಫ್ರಿಜ್‍ನಲ್ಲಿ ಏನೇನೋ ತುಂಬಿಸಿಟ್ಟರೆ ವಾಸನೆ ಬರುವುದು ಗ್ಯಾರೆಂಟಿ. ಆದ್ದರಿಂದ ಸಿಪ್ಪೆ ಸುಲಿದ ಹಸಿ ಆಲೂಗಡ್ಡೆಗೆ ಉಪ್ಪು ಸವರಿ ಒಂದು ನೀರಿರುವ ಬಟ್ಟಲಿನಲ್ಲಿ ಹಾಕಿ ಫ್ರಿಜ್ ಒಳಗೆ ಇಟ್ಟುನೋಡಿ.
* ಹಾಲನ್ನು ಕಾಯಿಸುವ ಮುನ್ನ ಹಾಲಿನ ಪಾತ್ರೆಯ ಒಳಭಾಗವನ್ನು ಸಂಪೂರ್ಣವಾಗಿ ಒದ್ದೆ ಮಾಡಿ ಕಾಯಿಸಿ. ಇದರಿಂದ ಹಾಲಿನ ಕೆನೆ ಪಾತ್ರೆಗೆ ಅಂಟುವುದಿಲ್ಲ. ಪಾತ್ರೆಯನ್ನೂ ಕೂಡ ಸುಲಭವಾಗಿ ತೊಳೆಯಬಹುದಾಗಿದೆ.
* ಕಾಫಿ ಫಿಲ್ಟರ್ಗೆ ನೀರು ಹಾಕುವಾಗ ನೀರು ಬಿಸಿಯಾಗಿರಬೇಕು. ಆದರೆ ಕುದಿಯುತ್ತಿರಬಾರದು. ಮರಳಿದ ನೀರು ಹಾಕಿದರೆ ರುಚಿ ಕೆಟ್ಟು ಹೋಗುತ್ತದೆ.
* ಗಾಜಿನ ಲೋಟಕ್ಕೆ ಬಿಸಿ ಬಿಸಿ ಕಾಫಿ ಅಥವಾ ಟೀ ಹಾಕುವ ಮುಂಚೆ ಆ ಲೋಟದಲ್ಲಿ ಒಂದು ಚಮಚ ಹಾಕಿಟ್ಟರೆ ಲೋಟಕ್ಕೆ ಬಗ್ಗಿಸಿದ ಪೇಯದ ಬಿಸಿಯನ್ನು ಆ ಚಮಚ ಸಾಕಷ್ಟು ತೆಗೆದುಕೊಳ್ಳುವ ಕಾರಣ ಆ ಲೋಟ ಬಿಸಿಗೆ ಒಡೆಯುವುದಿಲ್ಲ.
* ಕಾಫಿಗೆ ಒಂದು ಚಿಟಿಕೆ ಉಪ್ಪು ಹಾಕಿ ಕಲಸಿ ಕುಡಿದರೆ ಕಾಫಿಯ ರುಚಿ ಹೆಚ್ಚುತ್ತದೆ.
* ಟೀ ಸೊಪ್ಪನ್ನು ಗಾಜಿನ ಜಾಡಿಗಳಲ್ಲಿ ಹಾಕಿಟ್ಟರೆ ಟೀ ರುಚಿ ಹೆಚ್ಚುತ್ತದೆ. ಟೀ ಕುದಿಯುವಾಗ ಕಿತ್ತಳೆ ಸಿಪ್ಪೆ ಅಥವಾ ಏಲಕ್ಕಿ ಸಿಪ್ಪೆ ಹಾಕಿದರೆ ವಿಶಿಷ್ಟ ರುಚಿ ಸಿಗುತ್ತದೆ.
*ಮಳೆಗಾಲದಲ್ಲಿ ಮಿಕ್ಸಿಯಲ್ಲಿ ಬೆಣ್ಣೆ ತೆಗೆಯುವಾಗ ಬಿಸಿ ನೀರು ಮತ್ತು ಬೇಸಿಗೆಯಲ್ಲಿ ತಂಪು ನೀರು ಹಾಕಿದರೆ ಬೆಣ್ಣೆ ಸುಲಭವಾಗಿ ಬರುತ್ತದೆ.
* ಹಾಲು ಕಾಯಿಸುವಾಗ ಆ ಪಾತ್ರೆಯಲ್ಲಿ ಒಂದು ಸ್ಟಿಲ್ ಸೌಟು ಹಾಕಿಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ. ಸೊಪ್ಪು ಬೇಯಿಸುವಾಗ ಪಾತ್ರೆ ಮೇಲೆ ಮುಚ್ಚಳ ಇಡಬೇಡಿ. ಇದರಿಂದ ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಇರುತ್ತದೆ.
ತಿಂಡಿ- ತಿನಿಸು:
* ಇಡ್ಲಿ ಮೃದವಾಗಲು ಇಡ್ಲಿ ಮಿಶ್ರಣಕ್ಕೆ ಸ್ವಲ್ಪ ಅನ್ನ ಬೆರೆಸಿ
* ಪೂರಿ ಗರಿಗರಿಯಾಗಬೇಕಾದಲ್ಲಿ ಹಿಟ್ಟಿಗೆ ಸ್ವಲ್ಪ ರವೆ ಮಿಸ್ಕ್ ಮಾಡಿ
* ರೊಟ್ಟಿ ಮಾಡಿದ ಹೆಂಚಿಗೆ ನಿಂಬೆರಸ ಹಚ್ಚಿ ತೊಳೆದರೆ ಸ್ವಚ್ಛವಾಗುತ್ತದೆ.
* ದೋಸೆ ಅಕ್ಕಿಗೆ ಸ್ವಲ್ಪ ಹೆಸರುಬೇಳೆ ಹಾಕಿ ರುಬ್ಬಿದರೆ ದೋಸೆ ಮೃದುವಾಗುತ್ತದೆ.
* ರೊಟ್ಟಿ ಗಟ್ಟಿಯಾಗುವುದು ಮಾಮೂಲು. ಆದ್ದರಿಂದ ಅದರ ಹಿಟ್ಟು ಕಲಿಸುವಾಗ ಬಿಸಿ ನೀರಿನ ಜತೆಗೆ ಒಂದು ಕಪ್ ಬಿಸಿ ಹಾಲನ್ನೂ ಹಾಕಿ.
* ದೋಸೆ ಹಾಕುವ ಮುನ್ನ ದೋಸೆ ಹಿಟ್ಟಿಗೆ ಸ್ವಲ್ಪ ಸಕ್ಕರೆ ಸೇರಿಸಿ ದೋಸೆ ಮಾಡಿ. ದೋಸೆಗೆ ಬಣ್ಣ ಚೆನ್ನಾಗಿ ಬರುತ್ತದೆ.
ಹುಳು, ಜಿರಲೆ ಕಾಟ
* ಗೋಧಿ ಹಿಟ್ಟಿನ ಡಬ್ಬದಲ್ಲಿ ಸ್ವಲ್ಪ ಉಪ್ಪು ಬೆರೆಸಿ ನೋಡಿ. ಹುಳುಗಳಾಗುವುದಿಲ್ಲ.
* ಅಡುಗೆ ಮನೆಯಲ್ಲಿ ಹುಳುಗಳ ಕಾಟವಾಗಿದ್ದರೆ, ಒಂದು ಸಣ್ಣ ಬಾಟಲïನಲ್ಲಿ 2-3 ಚಮಚ ವಿನಿಗರ್ ಹಾಕಿ ಮುಚ್ಚಳ ಮುಚ್ಚಿ ಅದನ್ನು ಅಡುಗೆ ಮನೆಯಲ್ಲಿ ಇಟ್ಟುನೋಡಿ.
* ಜಿರಳೆಗಳು ಅಡುಗೆ ಮನೆಯಲ್ಲಿ ಕಾಟ ಕೊಡುತ್ತಿದ್ದರೆ, ರಾಸಾಯನಿಕ ಸ್ಪ್ರೇ ಬಳಸುವ ಬದಲು ಬೋರಿಕ್ ಪೌಡರ್ ಅಲ್ಲಲ್ಲಿ ಆಗ್ಗಾಗ್ಗೆ ಉದುರಿಸುತ್ತಿದ್ದರೆ ಜಿರಳೆಗಳು ನಿಯಂತ್ರಣಕ್ಕೆ ಬರುತ್ತವೆ.
ಹಣ್ಣು, ತರಕಾರಿ ಟಿಪ್ಸ್
* ಬಾಳೆಕಾಯಿಯನ್ನು ಹೆಚ್ಚುವಾಗ ಕೈಗಳಿಗೆ ಮಜ್ಜಿಗೆ ಸವರಿದರೆ ಕೈ ಕಪ್ಪಾಗುವುದಿಲ್ಲ.
* ತರಕಾರಿ ಒಣಗಿ ಹೋದರೆ ಚಿಂತೆ ಬೇಡ. ಒಂದು ಪಾತ್ರೆಯಲ್ಲಿ ಕಲ್ಲುಪ್ಪು ಹಾಕಿ ಅದರಲ್ಲಿ ತೊಳೆದಿಟ್ಟ ತರಕಾರಿಗಳನ್ನು ರಾತ್ರಿ ಇಡಿ. ಬೆಳಗಿನವರೆಗೆ ತರಕಾರಿ ತಾಜಾ ಆಗಿರುತ್ತದೆ.
* ಸೊಪ್ಪು ಅಥವಾ ಇತರ ತರಕಾರಿಗಳನ್ನು ಬಾಡಿಸುವಾಗ ಬಣ್ಣ ಮಾಸಿಹೋಗುತ್ತದೆ ಎಂಬ ಚಿಂತೆಯೇ? ಚಿಟಿಕೆ ಪುಡಿ ಉಪ್ಪು ಹಾಕಿ ಬಾಡಿಸಿ ನೋಡಿ.
* ತರಕಾರಿ ಹಾಗೂ ಹಣ್ಣುಗಳು ತಾಜಾ ಇರಬೇಕೆಂದರೆ ಅವುಗಳನ್ನು ಪೇಪರ್ನಲ್ಲಿ ಸುತ್ತಿಡಿ.
* ದ್ರಾಕ್ಷಿ, ಟೊಮ್ಯಾಟೊ, ಕಿತ್ತಳೆಯಂಥ ಹುಳಿಯಾಗಿರುವ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಎರಡು ನಿಮಿಷಗಳ ಕಾಲ ಇಟ್ಟು ನಂತರ ತಣ್ಣೀರಿಗೆ ಹಾಕಿದರೆ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು.
* ಕಟ್ ಮಾಡಿದ ಹಣ್ಣು ಕಪ್ಪಾಗದಂತೆ ತಡೆಯಲು ಹಣ್ಣೀನ ಮೇಲೆ ನಿಂಬೆ ರಸ ಹಚ್ಚಿ.
* ಆಲೂಗಡ್ಡೆ ಬೇಯಿಸಿದ ನೀರಿನಿಂದ ಬೆಳ್ಳಿ ಮತ್ತು ಇತರ ಪಾತ್ರೆಗಳನ್ನು ಅಚ್ಚುಕಟ್ಟಾಗಿ ತೊಳೆಯಬಹುದು.
* ಗಾಳಿ ಬರುವ ಸ್ಥಳದಲ್ಲಿ ಈರುಳ್ಳಿ ಹೆಚ್ಚಿದರೆ ಕಣ್ಣೀರು ಬರುವುದನ್ನು ತಪ್ಪಿಸಬಹುದು. ಕೈಯೆ¯್ಲÁ ಸೀಮೆಎಣ್ಣೆ ವಾಸನೆಯಿದ್ದರೆ ತಿಳಿ ಮಜ್ಜಿಗೆಯಿಂದ ಕೈಗಳನ್ನು ತೊಳೆಯಿರಿ.
* ಕೈಗಳಿಗೆ ಕೊಬ್ಬರಿ ಎಣ್ಣೆ ಹಚ್ಚಿಕೊಂಡು ಹಸಿ ಮೆಣಸಿನಕಾಯಿಗಳನ್ನು ಹೆಚ್ಚಿದರೆ ಕೈಗಳು ಉರಿಯುವುದಿಲ್ಲ. ಸೀಮೆ ಬದನೆಕಾಯಿ ಹೆಚ್ಚುವಾಗ ಅಂಗೈಗೆ ಕೊಬ್ಬರಿ ಎಣ್ಣೆ ಹಚ್ಚಿದರೆ ಕೈಯಲ್ಲಿ ಅಂಟಿನ ಸಿಪ್ಪೆ ಏಳುವುದಿಲ್ಲ.
* ಕಾಲಿಫ್ಲವರ್ಗೆ ಸ್ವಲ್ಪ ವಿನಿಗರ್ ಬೆರೆಸಿ ಬೇಯಿಸಿದರೆ ಅದರ ಬಿಳಿ ಬಣ್ಣ ಹಾಗೆಯೇ ಇರುತ್ತದೆ.
ಬೇಳೆ ಟಿಪ್ಸ್
* ಬೇಳೆ ಸಾರು ಮಾಡುವಾಗ, ಅಕ್ಕಿ ತೊಳೆದ ಮೊದಲ ನೀರನ್ನು ಚೆಲ್ಲಿ ಆಮೇಲೆ ತೊಳೆದ ನೀರನ್ನು ಹಾಕಿ ನೋಡಿ. ಸಾರು ರುಚಿಕಟ್ಟಾಗಿರುತ್ತದೆ.
* ತೊಗರಿ ಬೇಳೆ ಬೇಯಲು ಇಡುವಾಗ ಅದರ ಜತೆ ಒಂದು ಚೂರು ತೆಂಗಿನಕಾಯಿ ಹಾಕಿದರೆ ಬೇಳೆ ಬೇಗ ಮತ್ತು ಚೆನ್ನಾಗಿ ಬೇಯುತ್ತದೆ.
* ಬೇಳೆಯ ರುಚಿ ಹೆಚ್ಚಾಗಲು ಬೇಳೆ ಬೇಯಿಸುವ ಮೊದಲು ಸ್ವಲ್ಪ ಹುರಿದುಕೊಳ್ಳಿ.