ಹವಾಮಾನ ಏರಿಳಿತವನ್ನು ಉಲ್ಲನ್​ನಲ್ಲಿ ದಾಖಲಿಸಿದ ಮಹಿಳೆ!

woolen
Published on

ಡೆನ್ಮಾರ್ಕ್​: ಲಾಕ್​ಡೌನ್​ ಹಲವರ ಪಾಲಿಗೆ ನರಕವನ್ನು ತೋರಿಸಿದರೆ, ಕೆಲವರು ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡು ಹೊಸ ಹೊಸ ವಿಷಯಗಳನ್ನು ಕಲಿತಿದ್ದಾರೆ, ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ.

ಅಂಥದೇ ಒಂದು ಕುತೂಹಲ ಎನಿಸುವ, ಜತೆಗೆ ಅಷ್ಟೆ ಕ್ಲಿಷ್ಟಕರವಾಗಿರುವ ದಾಖಲೆಯನ್ನು ನಿರ್ಮಿಸಿದ್ದಾರೆ ಜೋಸಿ ಜಾರ್ಜ್ ಎಂಬ ಡೆನ್ಮಾರ್ಕ್​ ಮಹಿಳೆ.

ಇವರು ಕಳೆದ ವರ್ಷದ ಅಂದರೆ 2020ನೇ ಸಾಲಿನ ಹವಾಮಾನದ ಏರಿಳಿತಗಳನ್ನು ಉಲ್ಲನ್ ನೂಲಿನಲ್ಲಿ ದಾಖಲಿಸಿದ್ದಾರೆ! ಪ್ರತಿ ದಿನದ ಹವಾಮಾನವನ್ನು ನೋಡಿಕೊಂಡು ಅದರ ಮಾಪನವನ್ನು ನೇಯ್ಗೆಯ ಮೂಲಕ ದಾಖಲಿಸುವ ಮೂಲಕ ಎಲ್ಲರೂ ಅಚ್ಚರಿ ಪಡುವಂಥ ಕೆಲಸವನ್ನು ಮಾಡಿದ್ದಾರೆ.

ಈ ಕುರಿತು ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಸುಮಾರು ಒಂದು ಕೆಜಿ ಉಲ್ಲನ್ ನೂಲನ್ನು ಬಳಸಿಕೊಂಡು ಪ್ರತಿ ದಿನದ ಹವಾಮಾನವನ್ನು ನೋಡಿಕೊಂಡು ಅದರ ಮಾಪನವನ್ನು ನೇಯ್ಗೆಯ ಮೂಲಕ ದಾಖಲಿಸಿದ್ದೇನೆ. 365 ದಿನಗಳ ಹವಾಮಾನದ ದಾಖಲಾತಿಯನ್ನು ಮಾಡಲು ಒಂದು ಕೆ.ಜಿ ಉಲ್ಲನ್ ಬಳಸಿ 70, 368 ಹೊಲಿಗೆ ಹಾಕಿದ್ದೇನೆ ಎಂದಿದ್ದಾರೆ.

ಒಂದು ದಿನಕ್ಕೆ 2 ಸಾಲಿನಂತೆ 732 ಸಾಲಿನಿಂದ ಮೂರು ಮೀಟರ್ ಉದ್ದದ ಸ್ಕ್ರಾಪ್ ಅನ್ನು ತಯಾರು ಮಾಡಿದ್ದಾರೆ ಜೋಸಿ. ಇವರ ಈ ಕ್ಲಿಷ್ಟಕರ ಸಾಧನೆಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net