ಮನೆಯ ಆಳವಾದ ಹೊಂಡದಲ್ಲಿ ಕಾಲು ಜಾರಿ ಬಿದ್ದಾಕೆ ಪತ್ತೆಯಾಗಿದ್ದು ಪಕ್ಕದ್ಮನೆ ಬಾವಿಯಲ್ಲಿ!

well
Published on

ಕಣ್ಣೂರು (ಕೇರಳ): ಕೆಲವೊಮ್ಮೆ ಯಾರೂ ಊಹಿಸಲಾಗದ ವಿಚಿತ್ರಗಳು ನಡೆದೇ ಬಿಡುತ್ತವೆ. ಅಂಥದ್ದೇ ಒಂದು ವಿಚಿತ್ರ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ಬಟ್ಟೆ ಒಗೆಯುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ತಮ್ಮ ಮನೆಯ ಆಳವಾದ ಗುಂಡಿಗೆ ಬಿದ್ದಿದ್ದ ಮಹಿಳೆಯೊಬ್ಬರು ಪಕ್ಕದ ಮನೆಯ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಇದಾಗಿದ್ದು, ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ. ಇನ್ನೂ ಅಚ್ಚರಿಯ ವಿಷಯ ಎಂದರೆ, ಈ ಮಹಿಳೆ ಪವಾಡಸದೃಶವಾಗಿ ಪಾರಾಗಿರುವುದು.

ಉಮೆಬಾ ಎಂಬ 42 ವರ್ಷದ ಮಹಿಳೆ ಕಣ್ಣೂರಿನ ಇರಿಕುರ್ ಆಯಿಪುರ್​ನ ನಿವಾಸಿ. ಇವರು ಮನೆಯ ಆವರಣದಲ್ಲಿ ಬಟ್ಟೆ ಒಗೆಯುತ್ತಿದ್ದರು. ಇದ್ದಕ್ಕಿದ್ದಂತೆಯೇ ಅವರು ನಿಂತಿದ್ದ ನೆಲ ಕುಸಿದುಬಿಟ್ಟಿದೆ. ಉಮೆಬಾ ಅವರು ಆಯತಪ್ಪಿ ಹತ್ತಿರದಲ್ಲಿಯೇ ಇರುವ ಸುಮಾರು 25 ಅಡಿ ಆಳವಾದ ಗುಂಡಿಗೆ ಬಿದ್ದುಬಿಟ್ಟಿದ್ದಾರೆ.

ಅವರು ಬೀಳುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಿಸಲು ಹೋಗಿದ್ದಾರೆ. ಆದರೆ ಮಹಿಳೆ ಮಾತ್ರ ಎಲ್ಲಿಯೂ ಕಾಣಿಸಿರಲಿಲ್ಲ. ಟಾರ್ಚ್​ ಹಿಡಿದು, ಹಗ್ಗ ಬಿಟ್ಟು ಎಲ್ಲ ಮಾಡಿದರೂ ಮಹಿಳೆಯ ಇರುವಿಕೆಯೇ ಪತ್ತೆಯಾಗಲಿಲ್ಲ. ಇದರಿಂದ ಕುಟುಂಬಸ್ಥರು, ಸ್ಥಳೀಯರು ಎಲ್ಲರೂ ಕಂಗಾಲಾಗಿ ಹೋದರು. ಗಾಬರಿಗೊಂಡ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಅದೇ ವೇಳೆ ಅವರ ಮನೆಯ ಪಕ್ಕದ ಬಾವಿಯಲ್ಲಿ ಮಹಿಳೆಯೊಬ್ಬರ ಕೂಗು ಸಮೀಪದಲ್ಲಿ ಇರುವವರಿಗೆ ಕೇಳಿದೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಲುಪುವಷ್ಟರಲ್ಲಿ ಮಹಿಳೆಯನ್ನು ಸ್ಥಳೀಯರು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಉಮೆಬಾ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಂತರ ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮಹಿಳೆಯ ಮನೆಯ ಅಂಗಳದಲ್ಲಿ ಇರುವ ಆಳವಾದ ಗುಂಡಿಗೂ, ಪಕ್ಕದ ಮನೆಯ ಬಾವಿಗೂ ಭೂಗತವಾಗಿ ಗುಹೆಯೊಂದರ ಸಂಪರ್ಕ ಇರುವ ಕಾರಣ, ಇಲ್ಲಿ ಬಿದ್ದಾಕೆ ಅಲ್ಲಿ ಹೋಗಿ ಸಿಲುಕಿಕೊಂಡಿರುವುದು ತಿಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net