ಸನ್ನಿ ಲಿಯೋನ್​, ಇಮ್ರಾನ್​ ಹಶ್ಮಿ ನನ್ನ ಅಮ್ಮ-ಅಪ್ಪ; ಹಾಲ್​ ಟಿಕೆಟ್​ನಲ್ಲಿ ಬರೆದ ವಿದ್ಯಾರ್ಥಿ!

sunny1
Published on

ಪಟ್ನಾ: ಬಾಲಿವುಡ್​ ತಾರೆಯರಾದ ಸನ್ನಿ ಲಿಯೋನ್​ ಮತ್ತು ಇಮ್ರಾನ್​ ಹಶ್ಮಿ ನನ್ನ ಅಮ್ಮ-ಅಪ್ಪ. ನನ್ನ ವಿಳಾಸ ಚತುರ್ಭುಜ್ ಸ್ಥಾನ್ ಕೇರಾಫ್​ ರೆಡ್​ಲೈಟ್​ ಏರಿಯಾ ಎಂದು ವಿದ್ಯಾರ್ಥಿಯೊಬ್ಬ ಪರೀಕ್ಷಾ ಪ್ರವೇಶ ಪತ್ರದಲ್ಲಿ ಬರೆಯುವ ಮೂಲಕ ಉಪನ್ಯಾಸಕರನ್ನು ಬೇಸ್ತು ಬೀಳಿಸಿದ್ದಾನೆ.

ಇಲ್ಲಿಯ ಭೀಮ್​ರಾವ್ ಅಂಬೇಡ್ಕರ್ ಬಿಹಾರ್ ವಿಶ್ವವಿದ್ಯಾಲಯದ ಧನರಾಜ್ ಮಹತೋ ಪದವಿ ಕಾಲೇಜಿನ ದ್ವಿತೀಯ ಬಿ.ಎ ವಿದ್ಯಾರ್ಥಿ ಕುಂದನ್ ಕುಮಾರ್ ಎಂಬಾತ ಈ ರೀತಿ ಬರೆದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ತಂದೆಯ ಹೆಸರಿನ ಜಾಗದಲ್ಲಿ ಇಮ್ರಾನ್ ಹಶ್ಮಿ ಹೆಸರು ಬರೆಯಲಾಗಿದ್ದು, ಸ್ಪೆಲ್ಲಿಂಗ್ ತಪ್ಪಾಗಿದೆ. ಆದರೂ ನಟನ ಹೆಸರನ್ನು ಗುರುತಿಸಲಾಗಿದೆ. ಇನ್ನು ಸನ್ನಿ ಲಿಯೋನ್ ಹೆಸರನ್ನು ತಾಯಿಯ ಹೆಸರಿನ ಜಾಗದಲ್ಲಿ ಬರೆಯಲಾಗಿತ್ತು. ಅಲ್ಲದೆ ಊರಿನ ಹೆರಿನಲ್ಲಿ ರೆಡ್ ಲೈಟ್ ಏರಿಯಾ ಆಗಿರುವ ಚತುರ್ಭುಜ್ ಸ್ಥಾನ್ ಎಂದು ಕಿಡಿಗೇಡಿ ವಿದ್ಯಾರ್ಥಿ ಬರೆದಿರುವುದಾಗಿ ವಿಶ್ವವಿದ್ಯಾಲಯ ಹೇಳಿದೆ.

ಈ ರೀತಿ ಬರೆದಿರುವ ಪ್ರವೇಶ ಪತ್ರವನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಗಮನಿಸಿದ್ದಾರೆ. ನಂತರ ಇದು ನಕಲಿ ಪ್ರವೇಶ ಪತ್ರ ಎಂದು ತಿಳಿದುಬಂದಿದ್ದು, ಅದರ ಸ್ಕ್ರೀನ್ ಶಾಟ್‍ನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ಇದೀಗ ವೈರಲ್ ಆಗಿದೆ. ಪೋಸ್ಟ್​ ನೋಡಿದ ಇಮ್ರಾನ್ ಹಶ್ಮಿಯವರೇ ಬೇಸ್ತು ಬಿದ್ದಿದ್ದಾರೆ. ಅಬ್ಬಬ್ಬಾ ಎಂದು ಹುಬ್ಬೇರಿಸಿರುವ ಇಮ್ರಾನ್​, ಪ್ರತಿಜ್ಞೆ ಮಾಡಿ ಹೇಳುತ್ತೇನೆ. ಈತ ನನ್ನವನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಕಮೆಂಟಿಗರು ಕೂಡ ಸಾಕಷ್ಟು ರೀತಿಯಲ್ಲಿ ತಮಾಷೆಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಈ ವಿಷಯವನ್ನು ವಿಶ್ವವಿದ್ಯಾಲಯವು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದೆ. ನಿಸ್ಸಂಶಯವಾಗಿ ಇದು ಕಿಡಿಗೇಡಿತನ ಹಾಗೂ ವಿದ್ಯಾರ್ಥಿಯೇ ಇದಕ್ಕೆ ಹೊಣೆ. ವಿಚಾರಣೆಯ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ರಾಮ್ ಕೃಷ್ಣ ಠಾಕೂರ್ ಹೇಳಿದ್ದಾರೆ.

ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಪ್ರವೇಶ ಪತ್ರದಲ್ಲಿ ಮುದ್ರಿಸಲಾಗಿದ್ದ ಮೊಬೈಲ್ ನಂಬರ್ ಸಹಾಯದಿಂದ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net