ಇವಳೇ ಬೇಕು, ಪ್ರಾಣಿಗಳು ಬೇಡ ಎಂದ ಚಿಂಪಾಂಜಿ: ಮೃಗಾಲಯದಲ್ಲಿ ಮಹಿಳೆಗೆ ನೋ ಎಂಟ್ರಿ!

chimpanjee
Published on

ಬ್ರಸ್ಸೇಲ್​ (ಬೆಲ್ಜಿಯಂ)​: ಕೆಲವೊಂದು ಪ್ರಾಣಿಗಳಿಗೆ ಮನುಷ್ಯರ ಜತೆ ಅವಿನಾಭಾವ ಸಂಬಂಧವಿರುತ್ತದೆ. ಅದರಲ್ಲಿಯೂ ಸಾಕು ಪ್ರಾಣಿಗಳಿಗಂತೂ ತಮ್ಮ ಮಾಲೀಕರ ಮೇಲೆ ಅದೇನೋ ಬಾಂಧವ್ಯ. ಆದರೆ ಇಲ್ಲೊಂದು ಘಟನೆಯಲ್ಲಿ ಮೃಗಾಲಯದಲ್ಲಿರುವ ಚಿಂಪಾಂಜಿ ಮಹಿಳೆಯೊಬ್ಬಳ ಜತೆ ಸಿಕ್ಕಾಪಟ್ಟೆ ಕ್ಲೋಸ್​ ಆಗಿದ್ದರಿಂದ ಮಹಿಳೆಗೆ ಮೃಗಾಲಯದಿಂದಲೇ ನಿಷೇಧ ಹೇರಲಾಗಿದೆ!

ಆಗಿದ್ದೇನೆಂದರೆ, ಕಳೆದ ನಾಲ್ಕು ವರ್ಷಗಳಿಂದ ಬೆಲ್ಜಿಯಂನ ಮೃಗಾಲಯಕ್ಕೆ ಆಡಿ ಟಿಮ್ಮರ್ಮನಸ್​ ಎಂಬಾಕೆ ಭೇಟಿ ಕೊಡುತ್ತಿದ್ದಳು. ಮೇಲಿಂದ ಮೇಲೆ ಭೇಟಿ ಕೊಡುತ್ತಿದ್ದ ಇವಳ ಮೇಲೆ ಅಲ್ಲಿನ ಚಿಂಪಾಂಜಿಯೊಂದು ಬಹಳ ಆಕರ್ಷಿತವಾಗಿಬಿಟ್ಟಿದೆ. ಪ್ರತಿಸಲ ಬಂದಾಗಲೂ ಚಿಂಪಾಂಜಿ ಜತೆ ಸಲುಗೆಯಿಂದ ಇರುತ್ತಿದ್ದಳು ಆಡಿ. ಅದಕ್ಕೆ ಮುತ್ತಿಕ್ಕುವುದು, ತಲೆ ನೇವರಿಸುವುದನ್ನು ಮಾಡುತ್ತಿದ್ದಳು. ಆದ್ದರಿಂದ ಚಿಂಪಾಂಜಿ ಕೂಡ ಆಕೆ ಬರುವುದನ್ನೇ ಕಾಯುತ್ತಿತ್ತು.

ಆಡಿ ಬರುವವರೆಗೂ ಚಿಂಪಾಂಜಿ ಯಾರ ಜತೆಯೂ ಬೆರೆಯುತ್ತಿರಲಿಲ್ಲ. ಮಾತ್ರವಲ್ಲದೇ ಮಹಿಳೆಯ ಜತೆ ಮಾತ್ರ ಅದು ಸಲುಗೆಯಿಂದ ಇತ್ತು. ಬೇರೆ ಯಾವ ಪ್ರಾಣಿಗಳ ಜತೆ ಓಡಾಟವಾಗಲೀ ಇತರ ಚಿಂಪಾಂಜಿ ಜತೆ ಮಿಲನವಾಗಲಿ ಮಾಡುತ್ತಿರಲಿಲ್ಲ. ಮಹಿಳೆ ಬಂದಾಕ್ಷಣ ಕುಣಿದು ಕುಪ್ಪಳಿಸಿ ಅವಳ ಬಳಿ ಹೋಗುತ್ತಿತ್ತು. ಉಳಿದ ಸಮಯದಲ್ಲಿ ಮಂಕಾಗಿ ಒಂಟಿಯಾಗಿ ಕುಳಿತುಕೊಳ್ಳುತ್ತಿತ್ತು. ಇದು ಮೃಗಾಲಯದ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ತಕ್ಷಣವೇ ಮಹಿಳೆಗೆ ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ. ಚಿಂಪಾಂಜಿಯ ಈ ವರ್ತನೆ ಅದರ ಬೆಳವಣಿಗೆ ಮೇಲೆ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, ಚಿಂಪಾಂಜಿ ಜತೆ ತುಂಬಾ ಸಲುಗೆ ಇಟ್ಟುಕೊಂಡ ಕಾರಣ, ಮೃಗಾಲಯಕ್ಕೆ ಭೇಟಿ ನೀಡುವುದರಿಂದ ನಿಷೇಧ ಹೇರಲಾಗಿದೆ. ಮೃಗಾಯಲದ ಆಡಳಿತ ವಿಭಾಗ ನನ್ನೊಂದಿಗೆ ತಾರತಮ್ಯ ಅನುಸರಿಸುತ್ತಿದೆ ಎಂದು ದುಃಖ ತೋಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net