

ನವದೆಹಲಿ: ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ... ಕೆ.ಎಸ್.ನರಸಿಂಹಸ್ವಾಮಿ ಅವರ ಈ ಗೀತೆಯಂತೂ ಸದಾ ಹಚ್ಚಹಸಿರು. ಪತ್ನಿಯನ್ನು ಮನಸಾರೆ ಹಾಡಿ ಹೊಗಳುವ ಈ ಗೀತೆಯನ್ನು ಬಹುಶಃ ಎಲ್ಲರೂ ಗುನುಗುನಿಸಿಯೇ ಇರುತ್ತಾರೆ. ಆದರೆ ತಮ್ಮ ಪತ್ನಿಯ ವಿಷಯ ಬಂದಾಗ ಮಾತ್ರ ಹಲವು ಪುರುಷರಿಗೆ ಹೊಗಳಲು ಅದೇಕೋ ಹಿಂಜರಿಕೆ!
ಈ ಎಲ್ಲಾ ಹಿಂಜರಿಕೆಯನ್ನೂ ಹಿಂದೆ ಬಿಟ್ಟು, ನಿಮ್ಮ ಪತ್ನಿಯನ್ನು ಮನಸಾರೆ ಹೊಗಳಬೇಕು ಎನ್ನಿಸಿದರೆ ಇವತ್ತಿಗಿಂತ ಮತ್ತೊಂದು ದಿನ ಸಿಗಲಾರದು. ದಿನವೂ ಪತ್ನಿಯನ್ನು ಹೊಗಳಬೇಕು ಎಂದುಕೊಂಡರೂ ಯಾಕೋ ಮನಸ್ಸು ಬರುತ್ತಿಲ್ಲ ಎಂದಾದರೆ ಈ ದಿನ ಆ ಕೆಲಸವನ್ನು ಮಾಡಿನೋಡಿ. ಏಕೆಂದರೆ, ಇಂಥ ಪುರುಷರಿಗಾಗಿಯೇ ಇರುವುದು ಸೆಪ್ಟೆಂಬರ್ ತಿಂಗಳ ಮೂರನೇ ಭಾನುವಾರ. ಈ ವರ್ಷ ಅದು ಇವತ್ತೇ...
ಇಂದು ಹೆಂಡತಿಯನ್ನು ಹೊಗಳುವ ರಾಷ್ಟ್ರೀಯ ದಿನ (Wife Appreciation Day). ಪ್ರತಿದಿನ ಪತ್ನಿಯನ್ನು ಹೊಗಳಬೇಕು ಎನ್ನಿಸಿದರೂ 'ಅಹಂ' ಅಡ್ಡಿಬಂದರೆ ಅಥವಾ ವೇಳೆಯೇ ಇಲ್ಲ ಎನ್ನುವ ಪುರುಷರಿಗಾಗಿಯೇ ವರ್ಷದ ಒಂದು ದಿನ ಮೀಸಲು ಇಡಲಾಗಿದೆ. ಪ್ರತಿವರ್ಷದ ಸೆಪ್ಟೆಂಬರ್ ಮೂರನೇ ಭಾನುವಾರವನ್ನು Wife Appreciation Day ಆಗಿ ಆಚರಿಸಲಾಗುತ್ತಿದೆ. ತಮ್ಮ ತಮ್ಮ ಹೆಂಡತಿಯನ್ನು ಹೊಗಳಲು, ಅವರ ಕುರಿತು ಪ್ರಶಂಸೆ ವ್ಯಕ್ತಪಡಿಸಲು ಹೆಂಡತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಈ ದಿನವನ್ನು ಮೀಸಲು ಇರಿಸಲಾಗಿದೆ.
ಯಾಂತ್ರಿಕ ಬದುಕಿನ ಈ ದಿನಗಳಲ್ಲಿ ಯಾರನ್ನಾದರೂ ಹೊಗಳುವುದು ದೂರದ ಮಾತು, ಗಂಡ, ಹೆಂಡತಿ, ಮಕ್ಕಳು, ಹಿರಿಯರು ಯಾರ ಬಗ್ಗೆಯೂ ಕಾಳಜಿ ತೋರುವುದು, ಅವರನ್ನು ವಿಚಾರಿಸಿಕೊಳ್ಳುವುದೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ವರ್ಷದ ಒಂದು ದಿನವಾದರೂ ಎಲ್ಲರ ಕಾಳಜಿ ತೋರಲು ಇಂಥ ದಿನಗಳನ್ನು ಆಚರಿಸುತ್ತಾ ಬರಲಾಗಿದೆ. ಅಮ್ಮನ ದಿನ, ಅಪ್ಪನ ದಿನ, ಹೀಗೆ ಅನೇಕ ದಿನಗಳಂತೆ ಪತ್ನಿಯನ್ನು ಹೊಗಳುವ ದಿನವಾಗಿದೆ ಸೆಪ್ಟೆಂಬರ್ನ ಮೂರನೇ ಭಾನುವಾರ.
ಅಂದಹಾಗೆ ಇಂಥದ್ದೊಂದು ದಿನವನ್ನು ಮೊದಲು ಘೋಷಿಸಿರುವುದು 2006ರಲ್ಲಿ. ಹೆಂಡತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ರಾಷ್ಟ್ರೀಯ ದಿನವನ್ನು 2006ರಲ್ಲಿ ಅಧಿಕೃತವಾಗಿ ಅಂಗೀಕರಿಸಲಾಗಿದೆ. ಹೆಂಡತಿಯನ್ನು ಎಂದಿಗೂ ಲಘುವಾಗಿ ಪರಿಗಣಿಸಬಾರದು, ಆಕೆಯ ಅಪಾರ ಶಕ್ತಿ. ಸಾಮರ್ಥ್ಯ ಪುರುಷರನ್ನು ಮೀರಿಸಬಲ್ಲದು. ಇದನ್ನು ಪತಿ ಅರ್ಥ ಮಾಡಿಕೊಳ್ಳಬೇಕು ಎಂಬುದು ಈ ದಿನದ ಹಿಂದಿನ ಉದ್ದೇಶವಾಗಿದೆ. (ಏಜೆನ್ಸೀಸ್)