VIDEO: ತರಕಾರಿ ಮೇಲೆ ಮೂತ್ರ ವಿಸರ್ಜಿಸಿ ಮಾರಾಟ: ಅಸಹ್ಯ ವಿಡಿಯೋ ವೈರಲ್​- ವ್ಯಾಪಾರಿ ಪೊಲೀಸರ ವಶಕ್ಕೆ

veg
Published on

ಲಖನೌ: ರಸ್ತೆ ಬದಿಯ ವ್ಯಾಪಾರಿಗಳು ಅಲ್ಲಿಯೇ ಮೂತ್ರ ವಿಸರ್ಜನೆ ಮಾಡಿ ಅದೇ ಕೈಯಲ್ಲಿ ತಿನಿಸು ನೀಡುವ ಹಲವಾರು ವಿಡಿಯೋಗಳು ವೈರಲ್​ ಆಗಿವೆ. ಅದೇ ಇನ್ನೊಂದೆಡೆ ಕೊಳಚೆ ನೀರಿನಲ್ಲಿ ತರಕಾರಿ ತೊಳೆಯುತ್ತಿರುವ ವಿಡಿಯೋಗಳೂ ಸಾಕಷ್ಟು ಬಂದಿವೆ. ಆದರೆ ಇಲ್ಲೊಂದು ಘಟನೆಯಲ್ಲಿ ತರಕಾರಿ ವ್ಯಾಪಾರಿಯೊಬ್ಬ, ತರಕಾರಿ ಮೇಲೆಯೇ ಮೂತ್ರವಿಸರ್ಜನೆ ಮಾಡಿ ಅದನ್ನು ನೀಡುತ್ತಿರುವ ವಿಡಿಯೋ ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ.

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿದ್ದ ಷರೀಫ್ ಎಂಬ ತರಕಾರಿ ವ್ಯಾಪಾರಿ ಸಿಕ್ಕಿಬಿದ್ದಿದ್ದಾನೆ. ಈತನನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬರೇಲಿಯ ಇಜ್ಜತ್‌ನಗರ ಪ್ರದೇಶದಲ್ಲಿ ನಡೆದಿದೆ.

ದುರ್ಗೇಶ್ ಗುಪ್ತಾ ಅವರು ತಮ್ಮ ಕಾರಿನಲ್ಲಿ ಹೋಗುವಾಗ ಈ ದೃಶ್ಯ ನೋಡಿ ಅದನ್ನು ಚಿತ್ರೀಕರಿಸಿದ್ದಾರೆ. ರಸ್ತೆ ಬದಿಯಲ್ಲಿ ತರಕಾರಿ ಗಾಡಿ ಎಳೆಯುತ್ತಿದ್ದ ಷರೀಫ್​, ಅದರ ಮೇಲೆಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಗಮನಿಸಿದ್ದು, ತಕ್ಷಣ ಮೊಬೈಲ್​ನಲ್ಲಿ ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ.

ವಿಡಿಯೋ ವೈರಲ್​ ಆಗುತ್ತಲೇ ಪೊಲೀಸರಲ್ಲಿ ದೂರು ದಾಖಲಾಗಿದೆ. ಸದ್ಯ ಷರೀಫ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 'ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಕೈಗಾಡಿಯ ಕೆಳಭಾಗದಲ್ಲಿ ಇಟ್ಟಿದ್ದ ತರಕಾರಿಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ' ಎಂದು ಬರೇಲಿ ಎಸ್‌ಎಸ್‌ಪಿ ಅನಿರುದ್ಧ್ ಪಂಕಜ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net