ಪ್ಲೀಸ್​ ಶಾಲೆಗೆ ರಜೆ ಕೊಡ್ಬೇಡಿ, ಸಾಕಾಗಿ ಹೋಗಿದೆ... ಜಿಲ್ಲಾಧಿಕಾರಿಗೆ ಪತ್ರ ಬರೆದ 6ನೇ ಕ್ಲಾಸ್ ವಿದ್ಯಾರ್ಥಿನಿ

school
Published on

ತಿರುವನಂತಪುರ: ಶಾಲೆಗೆ ರಜೆ ಯಾವಾಗ ಸಿಗುತ್ತದೆ ಎಂದು ಕಾಯುವುದು ಸಹಜ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕೇರಳದ ವಿದ್ಯಾರ್ಥಿನಿಯೊಬ್ಬಳು ಜಿಲ್ಲಾಧಿಕಾರಿಗೆ ಪತ್ರ ಬರೆದು ದಯವಿಟ್ಟು ರಜೆ ಕೊಡಬೇಡಿ. ರಜೆಯಲ್ಲಿ ಎಲ್ಲ ಮಕ್ಕಳೂ ಖುಷಿಯಾಗಿರುವುದಿಲ್ಲ ಎಂದು ಹೇಳಿಕೊಂಡಿದ್ದಾಳೆ.

ಸಫೂರಾ ನೌಷದ್‌ ಎಂದು ನನ್ನ ಹೆಸರು. ನಾನು 6ನೇ ತರಗತಿ ವಿದ್ಯಾರ್ಥಿನಿ ಎಂದಿರುವ ಬಾಲಕಿ, ಈ ರೀತಿ ಪತ್ರ ಬರೆದು ಖುದ್ದು ಜಿಲ್ಲಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದ್ದಾಳೆ. ವಯನಾಡಿನ ಜಿಲ್ಲಾಧಿಕಾರಿ ಎ.ಗೀತಾ ಅವರಿಗೆ ಇ-ಮೇಲ್ ಮೂಲಕ ಬುಧವಾರ ರಜೆ ಘೋಷಿಸದಂತೆ ಮನವಿ ಮಾಡಿದ್ದಾಳೆ.

ವಾರಾಂತ್ಯದ ರಜೆಯ ನಂತರ, ತೀವ್ರ ಮಳೆಯಿಂದಾಗಿ ಜಿಲ್ಲಾಡಳಿತ ಸ್ಥಳೀಯ ರಜೆ ಘೋಷಿಸಿದ್ದರಿಂದ ಸೋಮವಾರವೂ ಈ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು ತೆರೆದಿರಲಿಲ್ಲ. ಮೊಹರಂ ನಿಮಿತ್ತ ರಾಜ್ಯ ಸರ್ಕಾರ ಈಗಾಗಲೇ ಮಂಗಳವಾರ ರಜೆ ಘೋಷಿಸಿರುವುದರಿಂದ, ವಯನಾಡಿನಲ್ಲಿ ಸತತ ನಾಲ್ಕು ದಿನಗಳ ಕಾಲ ಶಾಲೆಗಳು ಮುಚ್ಚಿವೆ. ಇದರಿಂದ ಬೇಸರಗೊಂಡಿರುವ ಬಾಲಕಿ, ʻಸತತ ನಾಲ್ಕು ದಿನ ಮನೆಯಲ್ಲಿರುವುದು ನಿಜಕ್ಕೂ ಕಷ್ಟ. ದಯವಿಟ್ಟು ಬುಧವಾರದಂದು ತರಗತಿ ನಡೆಸಲು ಅನುಮತಿ ನೀಡಿʼ ಎಂದು ಇ-ಮೇಲ್‌ನಲ್ಲಿ ತಿಳಿಸಿದ್ದಾಳೆ.

ಇದನ್ನು ಜಿಲ್ಲಾಧಿಕಾರಿ ಎ.ಗೀತಾ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡು ವಿದ್ಯಾರ್ಥಿನಿಗೆ ಶಹಭಾಸ್​ ಎಂದಿದ್ದಾರೆ. ಆಕೆ ಬರೆದಿರುವ ಇ-ಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ವಿದ್ಯಾರ್ಥಿನಿಯನ್ನು ಪ್ರಶಂಸಿಸಿರುವ ಜಿಲ್ಲಾಧಿಕಾರಿ, ಈ ದೇಶ ಮತ್ತು ಪ್ರಪಂಚದ ಭವಿಷ್ಯವು ಅವರ ಕೈಯಲ್ಲಿ ಸುರಕ್ಷಿತವಾಗಿದೆ. ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು, ಶಿಕ್ಷಕರು, ಸರ್ಕಾರ ಮತ್ತು ಸಮಾಜವು ಈ ಪೀಳಿಗೆಯ ಬಗ್ಗೆ ಹೆಮ್ಮೆಪಡಬೇಕು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net