

ಕಾನ್ಪುರ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಗ್ಯಾಂಗ್ಸ್ಟರ್ ಎನ್ಕೌಂಟರ್ ಪ್ರಕರಣದ ತನಿಖೆ ಇನ್ನೂ ನಡೆಯುತ್ತಲೇ ಇದೆ. ಇದಾಗಲೇ ಈತನಿಗೆ ಸಹಾಯ ಮಾಡಿರುವ ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಇದೀಗ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರನ್ನು ಅಮಾನತು ಮಾಡಲಾಗಿದೆ.
ದುಬೆಗೆ ಮೊದಲಿನಿಂದಲೂ ನೆರವಾಗುತ್ತಾ ಬಂದಿರುವ ಆರೋಪದ ಮೇಲೆ ಕಾನ್ಪುರದ ಮಾಜಿ ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಹಾಗೂ ಐಪಿಎಸ್ ಅಧಿಕಾರಿ ಅನಂತ್ ಡಿಯೋ ಇದೀಗ ಅಮಾನತುಗೊಂಡಿದ್ದಾರೆ.
ಕಳೆದ ಜುಲೈ 3 ರಂದು ಕಾನ್ಪುರದ ಚೌಬೆಪುರ್ ಪ್ರದೇಶದ ಬಿಕ್ರು ಗ್ರಾಮದಲ್ಲಿ ದುಬೆಯನ್ನು ಬಂಧಿಸಲು ಹೋಗಿದ್ದ ಸಂದರ್ಭದಲ್ಲಿ ಎಂಟು ಮಂದಿ ಪೊಲೀಸರನ್ನು ಆತ ಕೊಂದುಹಾಕಿದ್ದ. ನಂತರ ಜುಲೈ 10ರಂದು ಎನ್ಕೌಂಟರ್ನಲ್ಲಿ ದುಬೆ ಹತನಾಗಿದ್ದ.
ಎಂಟು ಮಂದಿ ಪೊಲೀಸರು ಬಂಧನಕ್ಕೆ ಹೋಗುತ್ತಿರುವ ವಿಷಯ ದುಬೆಗೆ ಹೇಗೆ ತಿಳಿದಿತ್ತು ಎಂಬ ಬಗ್ಗೆ ಮಾಹಿತಿ ಕಲೆ ಹಾಕಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಇದ್ದವರೇ ಆತನಿಗೆ ಸಹಾಯ ಮಾಡುತ್ತಿರುವ ಬಗ್ಗೆ ಸಂದೇಹ ಬಂದಿತ್ತು. ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಿದಾಗ ಇದು ಸತ್ಯ ಎನ್ನುವುದು ಸಾಬೀತಾಗಿತ್ತು.
ಈ ಕುರಿತು ಖಚಿತ ಮಾಹಿತಿ ಪಡೆದಿದ್ದ ಎಸ್‌ಐಟಿ ತಂಡ ದುಬೆಗೆ ಸಹಕರಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ನವೆಂಬರ್ 5 ರಂದು ಉತ್ತರಪ್ರದೇಶ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ವರದಿಯಲ್ಲಿ ಐಪಿಎಸ್ ಅಧಿಕಾರಿಯೊಬ್ಬರ ಹೆಸರನ್ನು ದಾಖಲಿಸಿದ್ದ ಎಸ್‌ಐಟಿ ಗ್ಯಾಂಗ್'ಸ್ಟರ್'ಗೆ ನೆರವು ನೀಡಿರುವುದಾಗಿ ತಿಳಿಸಿತ್ತು. ಇದರಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಪ್ರದೇಶ ಸರ್ಕಾರವು ಅಧಿಕಾರಿಯನ್ನು ಅಮಾನತುಗೊಳಿಸಿದೆ.