

ಗೋರಖ್‌ಪುರ: ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿಯೇ ಗೆದ್ದ ಎಂದು ಘೋಷಿಸುವ ಮೂಲಕ ಆತನಿಗೆ ವಿಜೇತ ಸರ್ಟಿಫಿಕೇಟ್ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿಯ ಅರ್ಸೋನ್ ಪಂಚಾಯಿತಿ ಚುನಾವಣೆಯಲ್ಲಿ ಇಂಥದ್ದೊಂದು ಕಿತಾಪತಿ ಮಾಡಿರುವ ಹೆಚ್ಚುವರಿ ಚುನಾವಣಾಧಿಕಾರಿ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ಇವರು ಮಾಡಿದ ಮೋಸ ಬೆಳಕಿಗೆ ಬರುತ್ತಿದ್ದಂತೆಯೇ ಚುನಾವಣಾಧಿಕಾರಿ ಸುನೀಲ್ ಕುಮಾರ್ ದೂರು ದಾಖಲು ಮಾಡಿದ್ದಾರೆ. ಹೆಚ್ಚುವರಿ ಚುನಾವಣಾಧಿಕಾರಿ ವೀರೇಂದ್ರ ಕುಮಾರ್ ಅವರ ವಿರುದ್ಧ ದೂರು ದಾಖಲಾಗಿದೆ.
ಇಷ್ಟು ಹೊತ್ತಿಗಾಗಲೇ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ಮುಗಿದುಹೋಗಿತ್ತು. ಇದರಿಂದ ಗ್ರಾಮದಲ್ಲಿ ಆಕ್ರೋಶ ಭುಗಿಲೆದ್ದಿದ್ದು ಪೊಲೀಸ್ ಚೌಕಿಗೆ ಬೆಂಕಿ ಇಟ್ಟು ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ಮಾಡಲಾಯಿತು. ಇಷ್ಟು ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪೊಲೀಸರು ಸುನೀಲ್ ಕುಮಾರ್ ಅವರ ದೂರಿನ ಆಧಾರದ ಮೇಲೆ ವೀರೇಂದ್ರಕುಮಾರ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ.
ಇದೇ ವೇಳೆ ಪೊಲೀಸ್ ಹೊರ ಚೌಕಿಗೆ ಬೆಂಕಿಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 18 ಮಂದಿಯನ್ನು ಬಂಧಿಸಿದ್ದು, ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.