ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ಒಂದು ವಾರದಲ್ಲೇ ಮದರಸಾಗಳಿಗೆ ಬಿಗ್​ ಶಾಕ್​ ಕೊಟ್ಟ ಯೋಗಿ ಸರ್ಕಾರ

madarasa
Published on

ಲಖನೌ (ಉತ್ತರ ಪ್ರದೇಶ): ಎಲ್ಲ ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಿ ಕಳೆದ ವಾರವಷ್ಟೇ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಇದೀಗ ಮದರಸಾಗಳಿಗೆ ದೊಡ್ಡ ಶಾಕ್​ ಒಂದನ್ನು ಸರ್ಕಾರ ನೀಡಿದೆ. ಅದೇನೆಂದರೆ ಹೊಸ ಮದರಸಾಗಳಿಗೆ ಧನಸಹಾಯವನ್ನು ನಿಲ್ಲಿಸುವ ನಿರ್ಧಾರವನ್ನು ಯೋಗಿ ಸರ್ಕಾರ ಪ್ರಕಟಿಸಿದೆ.

ಹೊಸ ಮದರಸಾಗಳನ್ನು ಅನುದಾನದ ಪಟ್ಟಿಯಿಂದ ಹೊರಗಿಡುವ ಪ್ರಸ್ತಾಪವನ್ನು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಅಂಗೀಕರಿಸಲಾಗಿದೆ. ಮಾರ್ಚ್ 24 ರಂದು ನಡೆದ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಹೊಸ ಮದರಸಾಗಳಿಗೆ ಅನುದಾನ ನಿಲ್ಲಿಸುವ ಈ ಆದೇಶವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಆದೇಶ ಮಂಡಿಸಿದರು. ಈ ಮೂಲಕ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸರ್ಕಾರದ ನೀತಿಗೆ ಹಾಲಿ ಸರ್ಕಾರ ಅಂತ್ಯ ಹಾಡಿದೆ.

ಉತ್ತರ ಪ್ರದೇಶದಲ್ಲಿ 7,000ಕ್ಕೂ ಹೆಚ್ಚು ಮದರಸಾಗಳಿವೆ. ಇವಗಳ ಪೈಕಿ ನಕಲಿ ಮದರಸಾಗಳು ಕಾರ್ಯ ನಿರ್ವಹಿಸುತ್ತಿದ್ದ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದಿದ್ದವು. ಇವುಗಳ ತನಿಖೆ ನಡೆಸಲು ಸಮಿತಿಯನ್ನು ಸಹ ರಚನೆ ಮಾಡಲಾಗಿತ್ತು. ಅವುಗಳು ನೀಡಿರುವ ವರದಿಯ ಆಧಾರದ ಮೇಲೆ ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಮದರಸಾ ಆಧುನೀಕರಣ ಯೋಜನೆಯಡಿಯಲ್ಲಿ 479 ಕೋಟಿ ರೂ.ಗಳನ್ನು ವಿನಿಯೋಗಿಸಿತ್ತು. ಸುಮಾರು 16 ಸಾವಿರ ನೋಂದಾಯಿತ ಮದರಸಾಗಳ 558 ಸಂಸ್ಥೆಗಳಿಗೆ ಹಣವನ್ನು ಮಂಜೂರು ಮಾಡಿದೆ.

ಈ ನಡುವೆ, ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸುವ ಯೋಜನೆಯನ್ನು ಬಿಜೆಪಿ ನೇತೃತ್ವದ ಸರ್ಕಾರ ಇರುವ ಮಧ್ಯಪ್ರದೇಶ, ಹರಿಯಾಣ ಮತ್ತು ಕರ್ನಾಟಕದಲ್ಲಿಯೂ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net