

ಶಹಜಹಾನ್ಪುರ (ಉತ್ತರ ಪ್ರದೇಶ): ಕೆಲವೊಮ್ಮೆ ನಂಬಲು ಅಸಾಧ್ಯವಾದ ಘಟನೆಗಳು ನಡೆಯುತ್ತವೆ. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಅತ್ಯಾಚಾರದಿಂದ ಹುಟ್ಟಿ ಅಮ್ಮನಿಂದಲೇ ತ್ಯಜಿಸ್ಪಲ್ಪಟ್ಟ ಯುವಕನೊಬ್ಬ 28 ವರ್ಷಗಳ ಬಳಿಕ ಅಮ್ಮನನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾನೆ. ಕೊನೆಗೆ ತನ್ನ ಬಾಳಲ್ಲಿ ಬಿರುಗಾಳಿ ಎಬ್ಬಿಸಿದ ಅಪ್ಪನನ್ನು, ಅಮ್ಮನ ಜತೆಗೂಡಿ ಹುಡುಕುವಲ್ಲಿಯೂ ಯಶಸ್ವಿಯಾಗಿದ್ದಾನೆ.
28 ವರ್ಷಗಳ ಹಿಂದೆ ಅಂದರೆ 1994ರಲ್ಲಿ ಶಹಜಹಾನ್ಪುರ 12 ವರ್ಷದ ಬಾಲಕಿಯ ಮೇಲೆ ಗ್ಯಾಂಗ್ರೇಪ್ ನಡೆದಿತ್ತು. ಸೋದರ ಮಾವನೊಂದಿಗೆ ಈಕೆ ವಾಸವಾಗಿದ್ದ ಸಂದರ್ಭದಲ್ಲಿ ಮನೆಯ ಸಮೀಪದ ಪರಿಚಯಸ್ಥರೇ ಇಬ್ಬರು ಸೇರಿ ಅತ್ಯಾಚಾರ ಎಸಗಿದ್ದರು. ಇದರ ಕುರಿತು ಯಾವುದೇ ದೂರು ದಾಖಲು ಮಾಡದಂತೆ ಬೆದರಿಕೆ ಹಾಕಿದ್ದರು. ಅತ್ಯಾಚಾರದಿಂದ ಬಾಲಕಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು.
ಆದರೆ, ಈ ಮಗುವಿದ್ದರೆ ಬಾಲಕಿಯ ಭವಿಷ್ಯಕ್ಕೆ ತೊಂದರೆ ಎನ್ನುವ ಕಾರಣಕ್ಕೆ ಮಗುವನ್ನು ಬೇರೆಯವರಿಗೆ ನೀಡಿ ಇಡೀ ಕುಟುಂಬ ರಾಂಪುರಕ್ಕೆ ಸ್ಥಳಾಂತರಗೊಂಡಿತು. ಆಕೆ ಪ್ರಾಪ್ತಳಾಗುತ್ತಿದ್ದಂತೆಯೇ ಸ್ಥಳೀಯ ನಿವಾಸಿಯೊಬ್ಬನ ಜತೆ ಮದುವೆಯನ್ನೂ ಮಾಡಿಕೊಡಲಾಯಿತು. 10 ವರ್ಷ ಸಂಸಾರ ಚೆನ್ನಾಗಿಯೇ ನಡೆಯಿತು. ಆದರೆ ಆಕೆಯ ದುರದೃಷ್ಟದಿಂದ ಪತ್ನಿಯ ಮೇಲೆ ಚಿಕ್ಕವಯಸ್ಸಿನಲ್ಲಿ ಅತ್ಯಾಚಾರ ನಡೆದ ವಿಷಯ ಆಕೆಯ ಗಂಡನಿಗೆ ತಿಳಿಯಿತು. ಆದ್ದರಿಂದ ಆತ, ಈಕೆಗೆ ಡಿವೋರ್ಸ್ ನೀಡಿದ.
ಹೀಗೆ ವರ್ಷಗಳು ಉರುಳಿ, ಆಕೆಯ ಮಗ 28ನೇ ವಯಸ್ಸಿನವನಾದ. ಆತನಿಗೆ ತನ್ನ ತಾಯಿ-ತಂದೆಯ ಬಗ್ಗೆ ಕುತೂಹಲ ಹೆಚ್ಚಾಯಿತು. ತನ್ನನ್ನು ಬೆಳೆಸುತ್ತಿರುವವರು ಅಸಲಿ ತಂದೆ-ತಾಯಿಯಲ್ಲ ಎನ್ನುವ ವಿಷಯ ತಿಳಿಯಿತು. ಈ ಬಗ್ಗೆ ಆತ ತನಿಖೆಯನ್ನೇ ಕೈಗೊಂಡುಬಿಟ್ಟ. ಅಲ್ಲಲ್ಲಿ ವಿಚಾರಿಸಿದಾಗ ತಾಯಿಯ ವಿಳಾಸ ಸಿಕ್ಕಿತು. ತಾಯಿಯ ಬಳಿ ಹೋಗಿ ಎಲ್ಲಾ ವಿಷಯವನ್ನೂ ಹೇಳಿದಾಗ ಮಗನನ್ನು ಕಂಡು ಆಕೆಗೆ ಸ್ವರ್ಗವೇ ಸಿಕ್ಕಂತಾಯಿತು.
ಇತ್ತ ಮಗ ಸಿಗುತ್ತಿದ್ದಂತೆಯೇ, ಆತನ ತಂದೆ ಯಾರು ಎಂಬ ಬಗ್ಗೆ ತಿಳಿದುಕೊಳ್ಳುವ ಆಸೆ ಈಕೆಗೆ ಆಯಿತು. ಮಗ ತನ್ನ ತಂದೆಯ ಬಗ್ಗೆ ಪ್ರಶ್ನೆ ಮಾಡಿದಾಗ ಇವಳಿಗೂ ಆ ಆಸೆ ಹುಟ್ಟಿತು. ಇಬ್ಬರು ಸೇರಿ ಅತ್ಯಾಚಾರ ಎಸಗಿದ್ದರು. ಆದರೆ ಮಗುವಿನ ತಂದೆ ಯಾರು ಎಂದು ತಿಳಿದುಕೊಳ್ಳಲು ಬಯಸಿದ ಈ ಅಮ್ಮ, ಡಿಎನ್ಎ ಪರೀಕ್ಷೆಗೆ ಅನುಮತಿ ನೀಡುವಂತೆ ಕೋರ್ಟ್ ಮೆಟ್ಟಿಲೇರಿದಳು. ಕೋರ್ಟ್ ಇದಕ್ಕೆ ಅನುಮತಿ ನೀಡಿತು.
ಅತ್ಯಾಚಾರದ ಪ್ರಕರಣ ರೀ-ಓಪನ್ ಮಾಡಲಾಯಿತು. ಪೊಲೀಸರು ಒಬ್ಬ ಆರೋಪಿ ಮೊಹಮ್ಮದ್ ರಾಜಿಯನ್ನು (48) ಹೈದರಾಬಾದ್ನಲ್ಲಿ ಹಾಗೂ ಇನ್ನೋರ್ವ ಆರೋಪಿ ನಖಿ ಹಸನ್ನನ್ನು ಒಡಿಶಾದಲ್ಲಿ ಕಂಡುಹಿಡಿದರು. ಮೊದಲು ಮೊಹಮ್ಮದ್ ರಾಜಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಡಿಎನ್ಎ ಮ್ಯಾಚ್ ಆಗಿ ಈತನೇ ಆ ಯುವಕನ ತಂದೆ ಎನ್ನುವುದು ವರದಿಯಿಂದ ಬಹಿರಂಗಗೊಂಡಿದೆ.
ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದಿಂದ ಆತ ಶಾಕ್ಗೊಂಡಿದ್ದಾನೆ. ಇನ್ನೋರ್ವ ಒಡಿಶಾದಲ್ಲಿದ್ದು, ಆತನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ (ಏಜೆನ್ಸೀಸ್)