

ಕೊಯಮತ್ತೂರು: ಐವರು ಶಾಲಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ 79 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಕೇರಳದ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯ ಆದೇಶಿಸಿದೆ.
ಕಣ್ಣೂರು ಜಿಲ್ಲೆಯ ಪಯ್ಯನೂರಿನ ಆಲಪಡಂಬು ನಿವಾಸಿ ಪಿ.ಇ.ಗೋವಿಂದನ್ ನಂಬೂದರಿ ಎಂಬಾತನಿಗೆ ಈ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ, ಜತೆಗೆ ಈತನಿಗೆ 2.70 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
2013-2014ರ ಅವಧಿಯಲ್ಲಿ ಈತ ತರಗತಿಯಲ್ಲಿಯೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ವಿದ್ಯಾರ್ಥಿನಿಯೊಬ್ಬಳ ಪಾಲಕರು ಮಗಳ ನಡವಳಿಕೆಯಿಂದ ಸಂದೇಹಗೊಂಡಾಗ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಪ್ರಯೋಜನ ಆಗಲಿಲ್ಲ ಎಂದು ಅವರು ಪೊಲೀಸರಲ್ಲಿ ದೂರಿದ್ದರು.
ಈ ಹಿನ್ನೆಲೆಯಲ್ಲಿ ಶಿಕ್ಷಕ ಸೇರಿದಂತೆ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಹೆಲ್ಪ್ ಡೆಸ್ಕ್ ಪ್ರಭಾರಿ ಅವರ ವಿರುದ್ಧವೂ ಕೇಸ್ ದಾಖಲಾಗಿತ್ತು. ಘಟನೆಗಳು ಬೆಳಕಿಗೆ ಬಂದ ನಂತರ ಗೋವಿಂದನ್ ಅವರನ್ನು ವಜಾಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಹೆಲ್ಪ್ ಡೆಸ್ಕ್ ಪ್ರಭಾರಿ ಅವರನ್ನು ಕೋರ್ಟ್ ಬಿಡುಗಡೆ ಮಾಡಿದೆ. (ಏಜೆನ್ಸೀಸ್)