

ನವದೆಹಲಿ: ಇದೇ 5ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಭೂಮಿ ಪೂಜೆಗೆ ಭರ್ಜರಿ ತಯಾರಿ ನಡೆಸಿರುವ ಬೆನ್ನಲ್ಲೇ ತಮಗೆ ಆಹ್ವಾನ ನೀಡಿಲ್ಲ ಎಂದು ಒಂದೆಡೆ ಟೀಕೆಗಳು ಶುರುವಾಗಿದೆ. ಆದರೆ ಕರೊನಾ ವೈರಸ್ ಹಿನ್ನೆಲೆಯಲ್ಲಿ ಕೆಲವೇ ಕೆಲವು ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿರುವುದು ಎಲ್ಲರಿಗೂ ತಿಳಿದ ವಿಷಯ.
ಆದರೆ ಈ ನಡುವೆಯೇ ರಾಮಮಂದಿ ಭೂಮಿ ಪೂಜೆಗೆ ಹೋಗಬೇಕಿದ್ದ ಬಿಜೆಪಿ ಹಿರಿಯ ನಾಯಕಿ ಉಮಾಭಾರತಿ ಟ್ವೀಟ್ ಮಾಡುವ ಮೂಲಕ ತಾವು ಭೂಮಿ ಪೂಜೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಭೂಮಿ ಪೂಜೆ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಉಮಾ ಭಾರತಿ ಕರೊನಾ ವೈರಸ್ ಭೀತಿಯಿಂದ ತಾವು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಅತಿಥಿಗಳ ಪಟ್ಟಿಯಿಂದ ತನ್ನ ಹೆಸರು ಹೊರಗಿಡುವಂತೆ ಕಾರ್ಯಕ್ರಮದ ಹಿರಿಯ ಅಧಿಕಾರಿಗಳಿಗೆ ಹಾಗೂ ಪ್ರಧಾನಿ ಕಾರ್ಯಾಲಯಕ್ಕೂ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಶುಭಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ನನಗೆ ಆತಂಕ ಶುರುವಾಗಿದೆ ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಸುದ್ದಿ ಕೇಳಿದ ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆತಂಕ ಎದುರಾಗಿದೆ. ಷಾ ಹಾಗೂ ಬಿಜೆಪಿ ನಾಯಕರಿಗೆ ಸೋಂಕು ತಗುಲಿರುವ ಸುದ್ದಿ ಕೇಳಿದ ಬಳಿಕ ಭಯ ಶುರುವಾಗಿದೆ. ಅಯೋಧ್ಯೆ ಭೂಮಿ ಪೂಜೆಯಲ್ಲಿ ಭಾಗಿಯಾಗುವವರ ಅದರಲ್ಲೂ ಮೋದಿ ಬಗ್ಗೆ ನನಗೆ ಆತಂಕ ಹೆಚ್ಚಾಗಿದೆ ಎಂದು ಸರಣಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇಂದು ನಾನು ಭೋಪಾಲ್‌ನಿಂದ ಅಯೋಧ್ಯೆಗೆ ಹೊರಡಲಿದ್ದೇನೆ. ನಾಳೆ ಸಂಜೆ ಅಯೋಧ್ಯೆ ಸೇರುತ್ತೇನೆ. ಆದರೆ ಭೂಮಿಪೂಜೆ ನಡೆಯುವ ಸ್ಥಳಕ್ಕೆ ಮಾತ್ರ ಹೋಗುವುದಿಲ್ಲ. ಏಕೆಂದರೆ ನನಗೆ ಕರೊನಾ ಸೋಂಕಿನ ಭಯವಿದೆ. ಪ್ರಧಾನಿ ಮೋದಿಯವರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತರ ಘಟನೆಗಳು ನಡೆಯಬಾರದು. ಈ ಹಿನ್ನೆಲೆಯಲ್ಲಿ ನಾನು ಮನೆಯಲ್ಲೇ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತೇನೆ. ಕಾರ್ಯಕ್ರಮ ಮುಗಿಸಿ ಪ್ರಧಾನಿಯವರು ದೆಹಲಿಗೆ ಹೊರಟ ನಂತರ ನಾನು ಅಯೋಧ್ಯೆಗೆ ಹೋಗುತ್ತೇನೆ. ಅಲ್ಲಿಯವರೆಗೆ ಸರಯೂ ನದಿಯ ತಟದಲ್ಲಿ ವಿಹರಿಸುವುದಾಗಿ ಟ್ವಿಟರ್‌ನಲ್ಲಿ ಉಮಾ ಭಾರತಿ ಹೇಳಿದ್ದಾರೆ.