ಅವಳಿಲ್ಲದೇ ನಾನು ಬದುಕಲಾರೆ ಎಂದು ಆತ್ಮಹತ್ಯೆಗೆ ಯತ್ನಿಸಿದ ಭಗ್ನಪ್ರೇಮಿಯ ಕಾಪಾಡಿದ ಟ್ವಿಟರ್​!

twitter
Published on

ಮುಂಬೈ : ಪ್ರೇಯಸಿ ಕೈಕೊಟ್ಟ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಕೇರಳದ ಭಗ್ನಪ್ರೇಮಿಯೊಬ್ಬನನ್ನು ಟ್ವಿಟರ್​ ಉಳಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಡಿಪ್ಲೋಮಾ ಯುವಕನೊಬ್ಬನಿಗೆ ಆತನ ಸ್ನೇಹಿತೆ ಕೈಕೊಟ್ಟಿದ್ದಾಳೆ. ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಬೇಸತ್ತ ಯುವಕ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಟ್ವಿಟರ್‌ ನಲ್ಲಿ 'ಸಾಯುತ್ತೇನೆ' ಎಂದು ಪೋಸ್ಟ್ ಹಾಕಿದ್ದಾ‌ನೆ.

ಕೇರಳದ ಈ ಯುವಕ ಮುಂಬೈನ ದಾದರ್‌ನಲ್ಲಿರುವ ಹೋಟೆಲ್‌ಗೆ ರೂಮ್ ಬುಕ್ ಮಾಡಿದ್ದನು. ಅಲ್ಲಿಂದಲೇ ಆತ ಪೋಸ್ಟ್​ ಮಾಡಿದ್ದಾನೆ. ಇದನ್ನು ಗಮನಿಸಿದ ಪೊಲೀಸರು ಕೂಡಲೇ ಟ್ವಿಟರ್​ಗೆ ಈ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಆತ ಎಲ್ಲಿದ್ದಾನೆ ಎಂಬ ಬಗ್ಗೆ ತನಿಖೆ ನಡೆಸಲಾಗಿದೆ. ನಂತರ ಹೋಟೆಲ್​ನಲ್ಲಿ ಇರುವುದು ತಿಳಿದಿದೆ.

ಇನ್ಸ್‌ಪೆಕ್ಟರ್ ಸಂಜಯ್ ಗೋವಿಲ್ಕರ್ ಮತ್ತು ಹೋಟೆಲ್ ಮ್ಯಾನೇಜರ್ ನೇತೃತ್ವದ ತಂಡ ನಕಲಿ ಕೀಲಿಯೊಂದಿಗೆ ಕೊಠಡಿಯನ್ನು ತೆರೆದಿದೆ. ಆ ಸಮಯದಲ್ಲಿ ಯುವಕ ಕೈಯಲ್ಲಿ ಚಾಕು ಹಿಡಿದು ನಿಂತಿದ್ದ. ಕೂಡಲೇ ಆತನನ್ನು ರಕ್ಷಣೆ ಮಾಡಲಾಗಿದೆ. ಖಿನ್ನತೆಗೆ ಜಾರಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಕೌನ್ಸೆಲಿಂಗ್​ ನೀಡಲಾಗಿದೆ. ಯುವಕ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net