

ಕರಾಚಿ: ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿರುವ ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಅಹಮದ್ ಇದೀಗ ಹೇಳಿಕೆಯಿಂದ ಅಲ್ಲ, ಬದಲಿಗೆ ಅವರ ಕೃತ್ಯದಿಂದಲೇ ಭಾರಿ ಟ್ರೋಲ್ ಆಗಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನದ ರಾಯಭಾರಿಯ ಮಗಳ ಅಪಹರಣವಾಗಿ ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಆದರೆ ಇದೇ ಸಚಿವ ಅಪಹರಣ ಆಗಿಯೇ ಇಲ್ಲ ಎಂಬ ಹೇಳಿಕೆ ಕೊಟ್ಟು ಟ್ರೋಲ್ಗೆ ಒಳಗಾಗಿದ್ದರು. ಆದರೆ ಈಗ ಅವರು ನಗೆಪಾಟಲಿಗೆ ಈಡಾಗಿರುವುದು ದೋಣಿ ಓಡಿಸಲು ಶ್ರಮಪಟ್ಟ ವಿಡಿಯೋ ನೋಡಿ.
ತಮ್ಮ ಫಾರ್ಮ್ಹೌಸ್ನಲ್ಲಿ ದೋಣಿಯನ್ನು ಓಡಿಸಲು ಸಾಹಸ ಪಟ್ಟು ಕೊನೆಗೂ ದೋಣಿ ಕದಲದೇ ಅಲ್ಲಿಯೇ ಇರುವ ವಿಡಿಯೋ ಇದಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಮಾತ್ರವಲ್ಲದೇ ಮೀಮ್ಸ್ಗಳ ಸುರಿಮಳೆಯೇ ಆಗುತ್ತಿದೆ.
ಅಂದಹಾಗೆ, ಈ ವಿಡಿಯೋ ಅನ್ನು ಖುದ್ದು ಅವರೇ ಪೋಸ್ಟ್ ಮಾಡಿದ್ದಾರೆ. ಫಾರಂ ಹೌಸ್ನಲ್ಲಿ ತಾವು ದೋಣಿಯೊಂದರಲ್ಲಿ ಕುಳಿತು ಹುಟ್ಟು ಹಾಕುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ನೋಡಿ ಕಮೆಂಟಿಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ. ಈದ್ನ ಎರಡನೇ ದಿನ: ಫ್ರೀಡಮ್ ಹೌಸ್ನಲ್ಲಿ ದೋಣಿಯಾನ ಮಾಡುತ್ತಿರುವ ಆಂತರಿಕ ಸಚಿವ ಶೇಖ್ ರಶೀದ್ ಅಹಮದ್” ಎಂದು ಅಡಿಬರಹವನ್ನು ಇದಕ್ಕೆ ನೀಡಲಾಗಿದೆ. 49 ಸೆಕೆಂಡ್ಗಳ ಈ ವಿಡಿಯೋದಲ್ಲಿ ಸಚಿವರು ಎಷ್ಟೇ ಹುಟ್ಟು ಹಾಕಿದರೂ ದೋಣಿ ಮಾತ್ರ ಅಲುಗಾಡದೇ ನಿಂತಲ್ಲೇ ನಿಂತಿದ್ದು, ನೋಡುಗರನ್ನು ನಗೆಗಡಲಿನಲ್ಲಿ ತೇಲಿಸಿದೆ.
ನೀವೂ ನೋಡಿ ಈ ವಿಡಿಯೋ: