ಸಚಿವರ ಆಪ್ತೆಯ ಮನೆಯಲ್ಲಿ ರಾಶಿ ರಾಶಿ ಲೈಂಗಿಕ ಆಟಿಕೆಗಳು! ಇ.ಡಿಗೆ ಸಿಕ್ಕ ಬೆಳ್ಳಿಯ ಬಟ್ಟಲು ಹೇಳುತಿದೆ ಬೇರೊಂದು ಕಥೆ

arpitha1
Published on

ಕೋಲ್ಕತಾ: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ಸಂಬಂಧ ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಹಾಗೂ ನಟಿ ಅರ್ಪಿತಾ ಮುಖರ್ಜಿ ಅವರ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇದೀಗ ಅಚ್ಚರಿಯ ವಿಷಯವೊಂದನ್ನು ಬಹಿರಂಗಗೊಳಿಸಿದ್ದಾರೆ.

ಅರ್ಪಿತಾ ಮುಖರ್ಜಿ ಮನೆಯ ಮೇಲೆ ದಾಳಿ ನಡೆಸಿದಾಗ ಅಪಾರ ಚಿನ್ನಾಭರಣಗಳ ಜತೆಗೆ, 21 ಕೋಟಿ ರೂಪಾಯಿ ನಗದು ಕೂಡ ಪತ್ತೆಯಾಗಿತ್ತು. ಇವುಗಳಷ್ಟೇ ಅಲ್ಲದೇ, ಅರ್ಪಿತಾ ಅವರ ಮನೆಯಲ್ಲಿ ರಾಶಿ ರಾಶಿ ಸೆಕ್ಸ್​ ಟಾಯ್ಸ್​ (ಲೈಂಗಿಕ ಕ್ರಿಯೆಗೆ ಬಳಸುವ ಆಟಿಕೆಗಳು) ಪತ್ತೆಯಾಗಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಪ್ರಕರಣದಲ್ಲಿ ತೃಣಮೂಲದ ಮಾಜಿ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರನ್ನು ಇದಾಗಲೇ ಬಂಧಿಸಲಾಗಿದ್ದು, ಅವರನ್ನು ನಿನ್ನೆ (ಗುರುವಾರ) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಚಿವ ಸ್ಥಾನದಿಂದ ವಜಾ ಕೂಡ ಮಾಡಿದ್ದಾರೆ. ಇದರ ನಡುವೆಯೇ, ಇದೀಗ ಲೈಂಗಿಕ ಆಟಿಕೆಗಳು ಸಿಕ್ಕಿರುವುದು ವರದಿಯಾಗಿದೆ.

ಇದನ್ನು ಅರ್ಪಿತಾ ಅವರ ಮನೆಗೆ ತಂದವರು ಯಾರು, ಏಕೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ. ಈ ಆಟಿಕೆಗಳ ಸಮೀಪವೇ ಬೆಳ್ಳಿಯ ಬಟ್ಟಲುಗಳು ಸಿಕ್ಕಿರುವುದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ, ಬಂಗಾಳಿ ಜನರು ಹೊಸದಾಗಿ ಮದುವೆಯಾದ ದಂಪತಿಗೆ ಬೆಳ್ಳಿಯ ಬಟ್ಟಲುಗಳನ್ನು ನೀಡುತ್ತಾರೆ. ಹೊಚ್ಚ ಹೊಸತಾಗಿರುವ ಬೆಳ್ಳಿಯ ಬಟ್ಟಲುಗಳು ಅರ್ಪಿತಾ ಮನೆಯಲ್ಲಿ ಏನು ಮಾಡುತ್ತಿವೆ ಎಂಬ ಬಗ್ಗೆಯೂ ತನಿಖಾಧಿಕಾರಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಸೆಕ್ಸ್ ಟಾಯ್ಸ್​ಗೆ ಸಂಬಂಧಿಸಿದಂತೆ ಅರ್ಪಿತಾ ಅವರನ್ನು ವಿಚಾರಣೆಗೆ ಒಳಪಡಿಸಲು ಇಡಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದರ ನಡುವೆಯೇ, ಇಂಡಿಯಾ ಟುಡೇ ಕಾರ್ಯಕ್ರಮವೊಂದರಲ್ಲಿ ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಜಗದೀಪ್ ಧಂಖರ್ ಅವರ ವಿಡಿಯೋ ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಅನೇಕ ಮುಖ್ಯಮಂತ್ರಿಗಳು ಇದೇ ರೀತಿಯ ಆದರೆ ಇದಕ್ಕಿಂತ ಚಿಕ್ಕದಾದ ನೇಮಕಾತಿ ಹಗರಣಗಳಿಗಾಗಿ ಹಲವಾರು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ ಎಂದು ಜಗದೀಪ್ ಧಂಖರ್ ನೀಡಿರುವ ಸಂದರ್ಶನ ಇದಾಗಿದೆ. ಬಿಜೆಪಿ ನಾಯಕ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣವನ್ನು ಎಲ್ಲಾ ಹಗರಣಗಳ ತಾಯಿ ಎಂದು ಧಂಖರ್ ಕರೆಯುವುದನ್ನು ಕೇಳಬಹುದು.

ಏನಿದು ಹಗರಣ?

ಬಂಗಾಳದ ಗ್ರೂಪ್ ‘ಸಿ’ ಮತ್ತು ‘ಡಿ’ ಹಾಗೂ ಸಹಾಯಕ ಶಿಕ್ಷಕರು ಮತ್ತು ಪ್ರಾಥಮಿಕ ಶಿಕ್ಷಕರ ನೇಮಕಾತಿಯಲ್ಲಿನ ಹಗರಣದ ತನಿಖೆ ನಡೆಸುವಂತೆ ಕೋಲ್ಕತ ಹೈಕೋರ್ಟ್​ ಈ ಹಿಂದೆ ನಿರ್ದೇಶಿಸಿತ್ತು. ಇದಾದ ಬಳಿಕ ಸಿಬಿಐ ಈ ಸಂಬಂಧ ಎಫ್​ಐಆರ್​ ದಾಖಲಿಸಿತ್ತು. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿಬಂದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಇ.ಡಿ ಅರ್ಪಿತಾ ಹಾಗೂ ಸೇರಿದಂತೆ ಅನೇಕರ ಮನೆಗಳ ಮೇಲೆ ದಾಳಿ ನಡೆಸಿದೆ.

ಅಂದಹಾಗೆ ಸಚಿವ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದರು. ಆದರೆ, ಅವರನ್ನು ವಜಾಗೊಳಿಸಲಾಗಿದೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ. ಅರ್ಪಿತಾ ಮುಖರ್ಜಿ ಅಲ್ಲದೆ, ಬಂಗಾಳದ ಶಿಕ್ಷಣ ಸಚಿವ ಪರೇಶ್​ ಸಿ ಅಧಿಕಾರಿ ಮತ್ತು ಶಾಸಕ ಮಾಣಿಕ್​ ಭಟ್ಟಾಚಾರ್ಯ ಸೇರಿದಂತೆ ಇತರರ ಮನೆಗಳ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net