

ಕೋಲ್ಕತಾ: ಪಶ್ಚಿಮ ಬಂಗಾಳ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ನ (ಟಿಎಂಸಿ) ಹಿರಿಯ ನಾಯಕ ಹಾಗೂ ಸುಬ್ರತಾ ಮುಖರ್ಜಿ ನಿನ್ನೆ (ಗುರುವಾರ) ರಾತ್ರಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಉಸಿರಾಟದ ಸಮಸ್ಯೆಯಿಂದ ಮುಖರ್ಜಿ ಅವರು ಅ.24ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯದ ರಕ್ತನಾಳ ಕಟ್ಟಿಕೊಂಡಿದ್ದರಿಂದ ಎರಡು ಸ್ಟಂಟ್ಗಳನ್ನು ಅಳವಡಿಸಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದು ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಇವರ ನಿಧನಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ‘ದೀಪಗಳ ಹಬ್ಬವನ್ನು ಆಚರಣೆ ಮಾಡುತ್ತಿರುವ ಈ ಹೊತ್ತಿನಲ್ಲಿ ಕತ್ತಲು ನಮ್ಮನ್ನು ಆವರಿಸಿದೆ. ಇದು ದಿಗ್ಭ್ರಮೆ ಉಂಟು ಮಾಡುತ್ತಿದೆ. ನಾನು ಈಗ ಮಾತನಾಡಲು ಕೂಡಾ ಆಗುತ್ತಿಲ್ಲ. ಅವರನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಸಾಧ್ಯವಾಗಲಿಲ್ಲ’ ಎಂದಿದ್ದಾರೆ.
1971-1972 ರಲ್ಲಿ ಬ್ಯಾಲೀಗಂಜ್ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ಇವರು, 1972 ರಲ್ಲಿ ಸಚಿವರಾದರು. ಈ ಸಂದರ್ಭದಲ್ಲಿ ಇವರಿಗೆ 26 ವರ್ಷ ವಯಸ್ಸಾಗಿತ್ತು. ಸಚಿವ ಸಂಪುಟದಲ್ಲಿದ್ದ ಅತೀ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. ಇವರು ಕೋಲ್ಕತಾದ ಮೇಯರ್ ಕೂಡ ಆಗಿದ್ದರು. ಇವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆಪ್ತ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ. ಸಿಪಿಐಎಂ ನಾಯಕರು ಘೋಷಣೆಯನ್ನು ಕೂಗುವಾಗ, ‘ಇಂದಿರಾರ ಇಬ್ಬರು ಮಕ್ಕಳು, ಪ್ರಿಯಾ ರಂಜನ್ (ಮಾಜಿ ಕೇಂದ್ರ ಸಚಿವ) ಹಾಗೂ ಸುಬತ್ರಾ’ ಎಂದೇ ಹೇಳುತ್ತಿದ್ದರು. ಈ ಮೂಲಕವೇ ಆಗ ಇವರು ಹೆಸರುವಾಸಿಯಾಗಿದ್ದರು.