

ನವದೆಹಲಿ: ಟಿಕ್‌ಟಾಕ್ ಭಾರತದಲ್ಲಿ ಬ್ಯಾನ್ ಆಗಿ ಮೂರು ತಿಂಗಳಾಗುತ್ತಾ ಬಂದಿದೆ. ಜೂನ್ 29ರಿಂದ ಭಾರತದಲ್ಲಿ ಈ ಚೀನಿ ಆ್ಯಪ್ ಅಧಿಕೃತವಾಗಿ ನಿಷೇಧಕ್ಕೆ ಒಳಗಾಗಿದೆ. ಆದರೆ ಇದರ ಬೆನ್ನಲ್ಲೇ ಮತ್ತೊಮ್ಮೆ ಈ ಆ್ಯಪ್ ಹೊಸ ರೂಪ ಪಡೆದು ಭಾರತಕ್ಕೆ ಹಿಂಬಾಲಿನಿಂದ ಎಂಟ್ರಿ ಕೊಡಲಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು.
ಇದಕ್ಕೆ ಕಾರಣ ಅಮೆರಿಕ. ಚೀನಾದ ಜತೆಗೆ ಸಂಘರ್ಷಕ್ಕೆ ಇಳಿದಿದ್ದ ಅಮೆರಿಕ, ಭಾರತದಂತೆ ತನ್ನ ದೇಶದಲ್ಲಿಯೂ ಟಿಕ್‌ಟಾಕ್ ನಿಷೇಧ ಮಾಡುವುದಾಗಿ ಹೇಳಿತ್ತು. ಇದರಿಂದ ಭಯಗೊಂಡಿದ್ದ ಟಿಕ್‌ಟಾಕ್ ಒಡೆತನದ ಬೈಟ್ಡಾನ್ಸ್ ಕಂಪೆನಿ, ಅಮೆರಿಕದಲ್ಲಿಯೇ ತನ್ನ ಘಟಕ ಶುರು ಮಾಡಲು ಮುಂದಾಗಿತ್ತು.
ಈ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಮಾತುಕತೆ ಕೂಡ ನಡೆಸಿತ್ತು. ಇದರ ಮಾತುಕತೆ ನಡೆಯುತ್ತಿದ್ದಂತೆಯೇ, ಟಿಕ್‌ಟಾಕ್ ಉದ್ಯಮ ಶುರು ಮಾಡಲು ಒರಾಕಲ್ ಹಾಗೂ ಮೈಕ್ರೋಸಾಫ್ಟ್ ಕಂಪೆನಿ ಉತ್ಸುಕತೆ ತೋರಿದ್ದವು.
ಒಂದು ವೇಳೆ ಈ ಮಾರಾಟ ಮಾಡುವುದಾದರೆ ಸೆಪ್ಟೆಂಬರ್ 15ರವರೆಗೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ಟಿಕ್‌ಟಾಕ್ ಆ್ಯಪ್ ಅನ್ನು ಅಮೆರಿಕದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದರು. ಇದೇನಾದರೂ ಸಕ್ಸಸ್ ಆದರೆ, ಭಾರತದಲ್ಲಿಯೂ ಈ ಆ್ಯಪ್ ಪುನಃ ಶುರುವಾಗಲಿದೆ, ಇದರ ಮೇಲಿದ್ದ ನಿಷೇಧ ತೆರುವಾಗಲಿದೆ ಎಂಬುದಾಗಿ ಸುದ್ದಿ ಹರಡಿತ್ತು. ಇದು ಟಿಕ್‌ಟಾಕ್ ಪ್ರಿಯರಲ್ಲಿ ಸಂತಸದ ಅಲೆಯನ್ನು ಎಬ್ಬಿಸಿತ್ತು.
ಆದರೆ ಈಗ ಎಲ್ಲವೂ ಉಲ್ಟಾ ಆಗಿದೆ. ಈ ಹಿಂದೆ ತಿಳಿಸಿರುವಂತೆ ಬೈಟ್ಡಾನ್ಸ್ ಕಂಪೆನಿ ಒರಾಕಲ್ ಜತೆ ಮಾತುಕತೆಯನ್ನೇನೋ ನಡೆಸಿದೆ. ಈ ಮಾತುಕತೆ ಫಲಪ್ರದ ಕೂಡ ಆಗಿದೆ. ಈ ಮೂಲಕ ಚೀನಾದ ಟಿಕ್‌ಟಾಕ್ ಉದ್ಯಮ ಒರಾಕಲ್ ತೆಕ್ಕೆಗೆ ಬಿದ್ದಿರುವುದೂ ನಿಜವೇ.
ಆದರೆ, ಅಂದುಕೊಂಡಂತೆ ಆಗಲಿಲ್ಲ. ಏಕೆಂದರೆ ಬೈಟ್ಡಾನ್ಸ್ ಕಂಪೆನಿ ಒರಾಕಲ್ ಜತೆ ಕೇವಲ ಪಾಲುದಾರಿಕೆ ಹಂಚಿಕೊಂಡಿದ್ದು, ಅದನ್ನು ಸಂಪೂರ್ಣ ಮಾರಾಟ ಮಾಡಿಲ್ಲ. ಅಂದರೆ ಟಿಕ್‌ಟಾಕ್ ಒಡೆತನ ಚೀನಾ ಮೂಲದ ಬೈಟ್ಡಾನ್ಸ್ ಕಂಪೆನಿ ಬಳಿಯೇ ಸುರಕ್ಷಿತವಾಗಿದೆ.
ಆದ್ದರಿಂದ ಭಾರತದಲ್ಲಿ ಟಿಕ್‌ಟಾಕ್ ಮೇಲಿನ ನಿಷೇಧ ತೆರವುಗೊಳಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಹೇಳಿದೆ. ಇದು ಚೀನಾದ ಒಡೆತನದಲ್ಲಿ ಇರುವುದು ಮಾತ್ರವಲ್ಲದೇ, ಈ ಆ್ಯಪ್ನ ಸುರಕ್ಷತೆಯ ಬಗ್ಗೆ ಇದಾಗಲೇ ಸಾಕಷ್ಟು ಸಂದೇಹಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ನಿಷೇಧವನ್ನು ತೆರವುಗೊಳಿಸುವುದಿಲ್ಲ ಎಂದು ಭಾರತ ಹೇಳಿದೆ. ಟಿಕ್‌ಟಾಕ್ ವಿಡಿಯೋ ಹೆಸರಿನಲ್ಲಿ ಬಳಕೆದಾರರ ಮಾಹಿತಿಗಳನ್ನು ಕದಿಯುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ, ಮತ್ತೆ ಅದನ್ನು ವಾಪಸ್ ತರಲು ಸಾಧ್ಯವಿಲ್ಲ ಎಂದಿದೆ.