ನಮಗ್ಯಾವ ರೂಲ್ಸ್​ರೀ ಎಂದು ಹೆಲ್ಮೆಟ್​ ಇಲ್ದೇ ತ್ರಿಬಲ್​ ರೈಡಿಂಗ್​ ಹೋದ ಲೇಡಿ ಪೊಲೀಸರಿಗೆ ಬಿತ್ತು ದಂಡ

danda
Published on

ಖಮ್ಮಮ್ (ತೆಲಂಗಾಣ): ಹೆಲ್ಮೆಟ್​ ಹಾಕದಿದ್ರೆ, ಫೋನ್​ನಲ್ಲಿ ಮಾತನಾಡ್ತಿದ್ರೆ ಇಲ್ಲವೇ ತ್ರಿಬಲ್​ ರೈಡಿಂಗ್​ ಹೋದ್ರೆ... ಹೀಗೆ ಯಾವುದಾದ್ರೂ ಒಂದು ನಿಯಮ ಉಲ್ಲಂಘನೆ ಮಾಡಿದ್ರೂ ಪೊಲೀಸರು ಹಿಡಿದುಕೊಂಡು ಜಡೀತಾರೆ. ಆದರೆ ಈ ಮೂರೂ ನಿಯಮ ಉಲ್ಲಂಘನೆ ಮಾಡಿದ್ರೆ? ಮುಗೀತು ಕಥೆ.

ಆದರೆ ಸಾಮಾನ್ಯವಾಗಿ ಪೊಲೀಸರು ಈ ರೀತಿ ಮಾಡುತ್ತಿರುವುದು ಕಾಣಿಸುತ್ತಿದ್ದರೂ ಏನೂ ಮಾಡದೇ ಸುಮ್ಮನೇ ಹೋಗುವ ಸ್ಥಿತಿ ಜನರದ್ದು. ಆದರೆ ಇಲ್ಲಿ ಮೂವರು ಲೇಡಿ ಪೊಲೀಸರಿಗೆ ದಂಡ ವಿಧಿಸಿರುವ ಕಾರಣ, ಇದೀಗ ಇದು ಸುದ್ದಿಯಾಗಿದೆ.

ಹೆಲ್ಮೆಟ್ ಧರಿಸದೇ ಇರುವುದೂ ಮಾತ್ರವಲ್ಲದೇ, ತ್ರಿಬಲ್​ ರೈಡಿಂಗ್​ ಹೋಗಿದ್ದೂ ಅಲ್ಲದೇ, ಮೊಬೈಲ್​ನಲ್ಲಿ ಮಾತನಾಡಿಕೊಂಡು ಹೋದ ಮೂವರು ಮಹಿಳಾ ಕಾನ್ಸ್​ಟೆಬಲ್​ಗೆ ದಂಡ ವಿಧಿಸಿ ತೆಲಂಗಾಣ ಸರ್ಕಾರ ಆದೇಶಿಸಿದೆ. ಇವರಿಗೆ ತಲಾ 3,300 ರೂಪಾಯಿ ದಂಡ ವಿಧಿಸಲಾಗಿದೆ. ಜತೆಗೆ ಇಲಾಖಾವಾರು ತನಿಖೆಗೆ ಆದೇಶಿಸಲಾಗಿದೆ.

ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ಈ ದಂಡ ವಿಧಿಸಲಾಗಿದೆ. ಸಶಸ್ತ್ರ ವಿಭಾಗದ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಮತ್ತು ಒಬ್ಬರು ತೆಲಂಗಾಣದ ಟೌನ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಸಿವಿಲ್ ಕಾನ್‌ಸ್ಟೆಬಲ್ ಎನ್ನಲಾಗಿದೆ.

ಇವರು ಏಪ್ರಿಲ್ 9ರಂದು ವೈಎಸ್ ಶರ್ಮಿಳಾ ಅವರು ನಡೆಸುತ್ತಿದ್ದ ಸಭೆಯ ಉಸ್ತುವಾರಿಗೆ ಹೋಗುತ್ತಿದ್ದರು. ಆಗ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಪೊಲೀಸರಿಗೂ ದಂಡ ವಿಧಿಸಿರುವುದರಿಂದ ಇದೀಗ ಪೊಲೀಸ್​ ಇಲಾಖೆ ಭಾರಿ ಶ್ಲಾಘನೆಗೆ ಒಳಗಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net