ಕಳ್ಳರಿಗೆ ಬಲಿಯಾದ ಪೊಲೀಸ್ ಅಧಿಕಾರಿಯ ಶವ ನೋಡಿ ಪ್ರಾಣಬಿಟ್ಟ ಅಮ್ಮ! ಒಟ್ಟಿಗೇ ಶವ ಸಂಸ್ಕಾರ

police
Published on

ಪಟ್ನಾ: ಕಳ್ಳನನ್ನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡ ಪೊಲೀಸ್​ ಅಧಿಕಾರಿಯಾಗಿದ್ದ ಮಗನ ಶವವನ್ನು ನೋಡಿ ತಾಯಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟ ವಿಷಾದಕರ ಘಟನೆ ಪಟ್ನಾದಲ್ಲಿ ನಡೆದಿದೆ.

ಪಟ್ನಾದ ಕಿಷನ್‌ಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಗಿದ್ದ ಅಶ್ವಿನಿಕುಮಾರ್ ಅವರು ಕಳ್ಳರನ್ನು ಹಿಡಿಯಲು ಹೋಗಿ ಬಲಿಯಾದವರು. ಪಶ್ಚಿಮ ಬಂಗಾಳದ ಉತ್ತರ ದಿನಾಜ್ಪುರ ಜಿಲ್ಲೆಯಲ್ಲಿನ ಹಳ್ಳಿಯೊಂದರಲ್ಲಿ ಕಳವು ಪ್ರಕರಣದ ಆರೋಪಿಯ ಪತ್ತೆಗಾಗಿ ದಾಳಿ ನಡೆಸಲು ತೆರಳಿದ್ದಾಗ ಅವರ ಮೇಲೆ ಹಲ್ಲೆ ಮಾಡಿ ಸಾಯಿಸಲಾಗಿತ್ತು.

ಮೋಟಾರ್ ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಅಶ್ವಿನಿ ಕುಮಾರ್ ಅವರು ಹೋಗಿದ್ದರು. ಇವರ ಜತೆಗೆ ಇನ್ನೂ ಏಳು ಮಂದಿ ಪೊಲೀಸರು ತೆರಳಿದ್ದರು. ಆದರೆ ಗ್ರಾಮಸ್ಥರು ಹಲ್ಲೆ ನಡೆಸುತ್ತಿದ್ದಾಗ ಉಳಿದ ಪೊಲೀಸರು ಅಲ್ಲಿಂದ ಓಡಿಹೋಗಿದ್ದರು. ಯಾರ ನೆರವೂ ಇಲ್ಲದ ಕಾರಣ, ಗ್ರಾಮಸ್ಥರು ಥಳಿಸಿ ಅಶ್ವಿನಿಕುಮಾರ್​ ಅವರನ್ನು ಕೊಂದಿದ್ದರು.

ಅವರ ಶವವನ್ನು ನೋಡುತ್ತಿದ್ದಂತೆಯೇ ಅವರ ವಯಸ್ಸಾದ ತಾಯಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹಗಳನ್ನೂ ಬಿಹಾರದ ಪೂರ್ನಿಯಾ ಜಿಲ್ಲೆಯಲ್ಲಿನ ಅವರ ಗ್ರಾಮದಲ್ಲಿ ಅಕ್ಕಪಕ್ಕವೇ ಅಂತ್ಯಸಂಸ್ಕಾರ ಮಾಡಲಾಗಿದೆ.

ಅಶ್ವಿನಿಕುಮಾರ್​ ಅವರನ್ನು ಒಂಟಿಯಾಗಿ ಬಿಟ್ಟು ಓಡಿಬಂದ ಪೊಲೀಸರನ್ನು ಅಮಾನತು ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net