

ಮೀರತ್ (ಹರಿಯಾಣ): ರಸ್ತೆ ಮಧ್ಯೆ ಅಡ್ಡಲಾಗಿ ಹಾಕಲಾಗಿದ್ದ ವಿಭಜಕಕ್ಕೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಮೂವರು ಎಂಬಿಬಿಎಸ್ ವಿದ್ಯಾರ್ಥಿಗಳು ಸಜೀವವಾಗಿ ಸುಟ್ಟುಹೋಗಿರುವ ಭೀಕರ ಘಟನೆ ಹರಿಯಾಣದ ಮೀರತ್-ಝಜ್ಜರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ರೋಹ್ಟಕ್ನ ಪಿಜಿಐನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಯುವಕರು ರೋಹ್ಟಕ್ನಿಂದ ಹರಿದ್ವಾರಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಒಟ್ಟು ಆರು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕ ವೇಗವಾಗಿ ಕಾರನ್ನು ಓಡಿಸುತ್ತಿದ್ದ. ರಾಷ್ಟ್ರೀಯ ಹೆದ್ದಾರಿ-44ರ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಕಲ್ಲಿನ ಬ್ಯಾರಿಕೇಡ್‌ಗಳನ್ನು ರಸ್ತೆ ಮಧ್ಯೆ ಅಡ್ಡಲಾಗಿ ಅಳವಡಿಸಲಾಗಿತ್ತು. ಕತ್ತಲಲ್ಲಿ ಬ್ಯಾರಿಕೇಡ್ ಕಾಣಿಸಲಿಲ್ಲ. ವೇಗವಾಗಿದ್ದ ಕಾರು ಅದಕ್ಕೆ ಡಿಕ್ಕಿ ಹೊಡೆದಿದೆ.
ಈ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಕಾರಿನಲ್ಲಿದ್ದ ಆರು ಮಂದಿ ವಿದ್ಯಾರ್ಥಿಗಳ ಪೈಕಿ ಮೂವರು ಅಲ್ಲಿಯೇ ಸುಟ್ಟು ಕರಕಲಾದರೆ ಇನ್ನು ಮೂವರ ಸ್ಥಿತಿ ಗಂಭೀರವಾಗಿದೆ.
ರಸ್ತೆಗೆ ಅಡ್ಡಲಾಗಿ ಕಲ್ಲಿನ ಬ್ಯಾರಿಕೇಡ್‌ಗಳನ್ನು ಯಾವುದೇ ಮುನ್ಸೂಚನೆ ಇಲ್ಲದೇ ಅಳವಡಿಸಿದ ಅಧಿಕಾರಿಗಳು ಮತ್ತು ಕಾಮಗಾರಿ ಗುತ್ತಿಗೆ ಪಡೆದ ಪಂನಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.