

ತಿರುವನಂತಪುರ: ಪತ್ನಿ ಮತ್ತು ಆಕೆಯ ಸ್ನೇಹಿತೆಯರ ಕಾಟವನ್ನು ಸಹಿಸಿಕೊಳ್ಳಲಾಗದೇ ತನ್ನ ಕಾರಿನಿಂದ ಟ್ರಕ್ಗೆ ಗುದ್ದಿ ಮಗನೊಂದಿಗೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
ಪ್ರಕಾಶ್ ಎನ್ನುವ 48 ವರ್ಷದ ವ್ಯಕ್ತಿ ತಮ್ಮ 11 ವರ್ಷದ ಮಗ ಶಿವದೇವ್ ಜತೆ ಅಪಘಾತ ಮಾಡಿಕೊಂಡು ಮೃತಪಟ್ಟಿದ್ದಾರೆ!
ಕೃತ್ಯಕ್ಕೂ ಮುನ್ನ ಫೇಸ್‌ಬುಕ್ ಪೋಸ್ಟ್ ಮಾಡಿದ್ದು ಅದರಲ್ಲಿ ಪತ್ನಿ ಮತ್ತು ಆಕೆಯ ಸ್ನೇಹಿತರ ಫೋಟೋ ಶೇರ್ ಮಾಡಿರುವ ಪ್ರಕಾಶ್, ನಾನು ಸಾಯುತ್ತಿದ್ದೇನೆ. ಈ ವ್ಯಕ್ತಿಗಳೇ ನನ್ನ ಸಾವಿಗೆ ಕಾರಣರು. ಅವರಿಗೆ ಸೂಕ್ತ ಶಿಕ್ಷೆಯಾಗಬೇಕು ಎಂದಿದ್ದಾರೆ.
ದಂಪತಿ ನಡುವೆ ಸಂಬಂಧ ಚೆನ್ನಾಗಿ ಇರಲಿಲ್ಲ. ಪತ್ನಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಆಕೆ ಊರಿಗೆ ಮರಳಲು ಒಪ್ಪುತ್ತಿರಲಿಲ್ಲ. ಬದಲಿಗೆ ತನ್ನ ಐಷಾರಾಮಿ ಜೀವನಕ್ಕೆ ಪತಿಯಿಂದ ಸಾಕಷ್ಟು ಬೇಡಿಕೆ ಇಡುತ್ತಿದ್ದಳು. ಊರಿಗೆ ಮಾತ್ರ ಬರುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕಾರಿನಲ್ಲಿಯೂ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ನಾಲ್ಕು ಮಂದಿ ಹೆಸರು ಇದೆ. ನನ್ನ ಪತ್ನಿ ಮತ್ತು ಆಕೆಯ ಸ್ನೇಹಿತರು ನನಗೆ ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಹಿಂಸೆ ನೀಡುತ್ತಿದ್ದರು ಎಂದು ಡೆತ್ನೋಟ್ನಲ್ಲಿ ಬರೆಯಲಾಗಿದೆ. ಈ ಸ್ನೇಹಿತರು ಯಾರು? ಅವರು ಏನು ಹಿಂಸೆ ಕೊಡುತ್ತಿದ್ದರು ಎಂಬ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.