ಟೆಂಪೋ ಪಲ್ಟಿ: ಗೌರಿಬಿದನೂರು ರಸ್ತೆಯಲ್ಲಿ ಮದ್ಯದ ಹೊಳೆ- ಬಾಟಲಿಗಳ ರಾಶಿಯಲ್ಲಿ ಸಿಲುಕಿದ್ದ ಚಾಲಕನ ರಕ್ಷಣೆ

accident
Published on

ಚಿಕ್ಕಬಳ್ಳಾಪುರ: ಮದ್ಯದ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ಟೆಂಪೋ ಒಂದು ಪಲ್ಟಿ ಹೊಡೆದ ಪರಿಣಾಮ ರಸ್ತೆಯ ಮಧ್ಯದಲ್ಲಿಯೇ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಮದ್ಯದ ಹೊಳೆಯೇ ಹರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಕಣಿವೆಯ ಬಳಿ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದೆ. ಕಣಿವೆಯ ಇಳಿಜಾರಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಉರುಳಿ ಬಿದ್ದ ಪರಿಣಾಮ ಈ ಘಟನೆ ಸಂಭವಿಸಿದೆ.

ಮದ್ಯ ಸಂಗ್ರಹಣಾ ಗೋದಾಮಿನಿಂದ ಗೌರಿಬಿದನೂರಿನ ಕೆಲವು ಅಂಗಡಿಗಳಿಗೆ ಸರಬರಾಜು ಮಾಡುವ ಉದ್ದೇಶದಿಂದ ಮದ್ಯ ಸರಬರಾಜು ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಇದರಿಂದ ಬಾಟಲಿಗಳೆಲ್ಲಾ ಚೂರು ಚೂರಾಗಿ ರಸ್ತೆಯ ಮೇಲೆ ಬಿದ್ದಿವೆ.

ಟೆಂಪೋದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಪಾಕೆಟ್, ಬಿಯರ್ ಬಾಟಲಿಗಳು ಇದ್ದವು. ಇವೆಲ್ಲಾ ಒಡೆದು ಹೋಗಿವೆ ಎಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

ಟೆಂಪೋ ಉರುಳಿಬಿದ್ದ ಪರಿಣಾಮ, ಬಾಟಲಿಗಳ ನಡುವೆ ಟೆಂಪೋದಲ್ಲಿ ಚಾಲಕ ಸಿಕ್ಕಿಬಿದ್ದ ಪರಿಣಾಮ ಅವರನ್ನು ಹೊರಕೆಕ ತೆಗೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ಅವರನ್ನು ಸದ್ಯ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ. ಇದೇ ಜಾಗದಲ್ಲಿ ಕಳೆದ ಒಂದು ವಾರದ ಹಿಂದೆ ಅಡುಗೆ ಎಣ್ಣೆ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿ ಅಡುಗೆ ಎಣ್ಣೆ ರಸ್ತೆ ನಡುವೆ ಚೆಲ್ಲಿರುವುದಾಗಿ ಸ್ಥಳೀಯರು ಹೇಳಿದ್ದು, ಇದು ತುಂಬಾ ಅಪಾಯಕಾರಿ ಜಾಗ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net