

ಕೊಚ್ಚಿ: ಅಕ್ರಮ ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವಾರು ಅಧಿಕಾರಿಗಳ ಬುಡಕ್ಕೆ ತಂದಿಟ್ಟಿರುವ ಆರೋಪಿ ಸ್ವಪ್ನಾ ಸುರೇಶ್ ಅವರ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಈ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿರುವುದು ಎನ್‌ಐಎ ಅಧಿಕಾರಿಗಳು ನೀಡಿರುವ ಸಾಕ್ಷ್ಯಾಧಾರಗಳಿಂದ ತಿಳಿದುಬಂದಿದೆ. ತನಿಖೆಯನ್ನು ತೀವ್ರಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಯಾವುದೇ ಆಧಾರವಿಲ್ಲದೇ ನನ್ನ ವಿರುದ್ಧ ಸುಮ್ಮನೇ ಆರೋಪಗಳನ್ನು ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರಾಜಕೀಯ ವಿಚಾರವೂ ಸೇರಿಕೊಂಡಿದೆ. ನಾನು ತಪ್ಪು ಮಾಡದಿದ್ದರೂ ನನ್ನನ್ನು ಸಿಲುಕಿಸಲಾಗಿದೆ. ಹೀಗಾಗಿ ನನಗೆ ಜಾಮೀನು ನೀಡಬೇಕೆಂದು ಸ್ವಪ್ನಾ ಮನವಿ ಮಾಡಿದ್ದರು.
ರಾಜತಾಂತ್ರಿಕ ಮಾರ್ಗಗಳನ್ನು ದುರುಪಯೋಗಪಡಿಸಿಕೊಂಡು ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡಿದ ಆರೋಪದಡಿ ಸ್ವಪ್ನಾ ಸುರೇಶ್ ಸೇರಿದಂತೆ ಇತರರನ್ನು ಬಂಧಿಸಿ, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿದೆ.
ಸ್ವಪ್ನಾ ಸೇರಿದಂತೆ ರಾಜಕೀಯ ಘಟಾನುಘಟಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಗಳೂ ಕೇಳಿಬಂದಿದ್ದು, ತನಿಖೆ ಮುಂದುವರೆದಿದೆ.