

ನವದೆಹಲಿ: ಕರ್ನಾಟಕದಲ್ಲಿ ಕಂಬಳ ಇರುವಂತೆ ಮಹಾರಾಷ್ಟ್ರದಲ್ಲಿ ದಶಕಗಳಿಂದ ನಡೆಸಿಕೊಂಡು ಬಂದಿರುವ ಆಟವೆಂದರೆ ಅದು ಗೂಳಿ ರೇಸ್ (ಎತ್ತಿನಗಾಡಿ ಆಟ). ಆದರೆ ಕಂಬಳಕ್ಕೆ ಬಂದಿದ್ದ ಪ್ರತಿಯೋಧದಂತೆಯೇ ಗೂಳಿ ರೇಸ್ ಆಟದ ತಡೆಗೂ ಕೋರ್ಟ್ ಮೆಟ್ಟಿಲೇರಿತ್ತು ಪ್ರಾಣಿ ದಯಾ ಸಂಘ. ಆದರೆ ಸುಪ್ರೀಂಕೋರ್ಟ್ನಲ್ಲಿ ಗೂಳಿ ರೇಸ್ಗೆ ಜಯವಾಗಿದೆ. ನಾಲ್ಕು ವರ್ಷಗಳ ನಂತರ ಮತ್ತೆ ಈ ಆಟ ಶುರುವಾಗಲಿದೆ.
ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಅದರ ಅಡಿಯಲ್ಲಿ ಮಾಡಲಾದ ನಿಯಮಗಳಿಗೆ ಮಾಡಿದ ತಿದ್ದುಪಡಿಗಳ ಆಧಾರದ ಮೇಲೆ ಈ ರೇಸ್ ನಡೆಸಬೇಕು ಎಂದು ಕೋರ್ಟ್ ಹೇಳಿದೆ. ಕೆಲವು ಸಂಘಟನೆಗಳು ಇದರ ವಿರುದ್ಧ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದವು. ಪ್ರಾಣಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಅಡಿ ಈ ಆಟವನ್ನು ನಿಷೇಧಿಸಬೇಕು ಎಂದು ಅವರು ಕೋರಿದ್ದವು. ಈ ವಾದವನ್ನು ಮಾನ್ಯ ಮಾಡಿದ್ದ ಹೈಕೋರ್ಟ್ 2018ರಲ್ಲಿ ಆಟಕ್ಕೆ ತಡೆ ನೀಡಿತ್ತು.
ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಅದರಲ್ಲಿ ಕರ್ನಾಟಕದ ಕಂಬಳಕ್ಕೆ ನೀಡಿದ್ದ ಅನುಮತಿಯ ಬಗ್ಗೆಯೂ ಉಲ್ಲೇಖಿಸಲಾಗಿತ್ತು. ಇದನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳಾದ ಎಎಮ್ ಖಾನ್ವಿಲಾರ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಆಟಕ್ಕೆ ಷರತ್ತುಬದ್ಧ ಅನುಮತಿ ನೀಡಿದೆ.
ಇದರ ವಿಚಾರಣೆಯನ್ನು ಮುಂದೂಡಿರುವ ಕೋರ್ಟ್, ಕರ್ನಾಟಕದ ಕಂಬಳ, ತಮಿಳುನಾಡಿನ ರೇಸ್ ಜತೆ ಈ ಅರ್ಜಿಯ ವಿಚಾರಣೆಯನ್ನು ನಡೆಸಲಾಗುವುದು ಎಂದಿದೆ.