ಗುಟ್ಟಾಗಿ ಹುಟ್ಟಿದ ಮಗಳನ್ನು ಬರ್ಬರ ಹತ್ಯೆ ಮಾಡಿದ ಟಿವಿ ಓನರ್‌ ಇಂದ್ರಾಣಿ ಕೇಸ್‌ಗೆ ಭಾರಿ ಟ್ವಿಸ್ಟ್‌! ಕಾಶ್ಮೀರದಲ್ಲಿ ಜೀವಂತ?

sheenabora
Published on

ಮುಂಬೈ: ಶೀನಾ ಬೋರಾ ಹಾಗೂ ಇಂದ್ರಾಣಿ ಮುಖರ್ಜಿ... ಈ ಎರಡು ಹೆಸರು ಕಳೆದೊಂದು ದಶಕದಿಂದ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. 2012ರ ಏಪ್ರಿಲ್‌ನಲ್ಲಿ ನಡೆದಿದ್ದ ಈ ಮರ್ಡರ್‌ ಕೇಸ್‌ ಮೂರು ವರ್ಷಗಳ ಬಳಿಕ ಬೆಳಕಿಗೆ ಬಂದು ಇಡೀ ದೇಶಾದ್ಯಂತ ಬಾರಿ ಕುತೂಹಲ ಕೆರಳಿಸಿತ್ತು. ಕೇಸ್‌ನ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ.

ಟಿ.ವಿ.ಚಾನೆಲ್‌ ಒಂದರ ಓನರ್‌ ಆಗಿದ್ದ ಇಂದ್ರಾಣಿ ಮುಖರ್ಜಿ, ತನಗೆ ಅನಧಿಕೃತ ಸಂಬಂಧದಿಂದ ಹುಟ್ಟಿದ ಮಗಳು ಶೀನಾ ಬೋರಾಳನ್ನು ಕೊಲೆ ಮಾಡಿರುವ ಆರೋಪ ಹೊತ್ತ ಕೇಸ್‌ ಇದಾಗಿದೆ. ಶೀನಾ ಮತ್ತು ಮಿಖಾಯಿಲ್ ಇಬ್ಬರೂ ಇಂದ್ರಾಣಿಯ ಮೊದಲ ಸಂಬಂಧದಿಂದ ಜನಿಸಿದ ಮಕ್ಕಳು. ಆದರೆ ಈ ರಹಸ್ಯ ಕಾಪಾಡಿಕೊಂಡಿದ್ದ ಇಂದ್ರಾಣಿ, ಗುವಾಹಟಿಯಲ್ಲಿನ ತನ್ನ ಪಾಲಕರ ಜತೆ ಮಕ್ಕಳನ್ನು ಇರಿಸಿದ್ದಳು. 22 ವರ್ಷದ ಶೀನಾ ಮುಂಬೈಗೆ ಬಂದಾಗ, ಆಕೆಗೆ ಇಂದ್ರಾಣಿಯ ಸಹೋದರಿಯ ಮಗಳು ಎಂದು ಹೇಳಿಕೊಳ್ಳಬೇಕು ಮತ್ತು ತನ್ನ ಗುರುತು ಬಹಿರಂಗಪಡಿಸಬಾರದು ಎಂಬ ಷರತ್ತು ವಿಧಿಸಲಾಗಿತ್ತು.

ಆದರೆ ಈ ಮಗಳ ಅಮ್ಮನನ್ನು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಳು. ಹೀಗಾಗಿ ಇಂದ್ರಾಣಿ ತನ್ನ ಎರಡನೆಯ ಪತಿ ಜತೆಗೂಡಿ ಶೀನಾಳನ್ನು ಕೊಲೆ ಮಾಡಿ, ಮಿಖಾಯಿಲ್‌ನನ್ನೂ ಕೊಲ್ಲಲು ಸಂಚು ರೂಪಿಸಲಾಗಿತ್ತು ಎಂಬ ಆರೋಪವಿದೆ. ಈ ಕೊಲೆಯಲ್ಲಿ ಸಂಜೀವ್ ಖನ್ನಾ (ಶೀನಾ ಬೋರಾ ಅಪ್ಪ) ಕೂಡ ಆರೋಪಿ.

ಇಂದ್ರಾಣಿ ಮತ್ತು ಪೀಟರ್ 2002ರಲ್ಲಿ ಮದುವೆಯಾಗಿದ್ದರು. 2019ರ ಅಕ್ಟೋಬರ್‌ನಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದಾರೆ. ಕೊಲೆ ಆರೋಪ ಹೊತ್ತ ಪೀಟರ್ ಮುಖರ್ಜಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಬೇರೆ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ ಇಂದ್ರಾಣಿ ಮುಖರ್ಜಿ ಚಾಲಕ ಶ್ಯಾಮವರ್ ರೈ ಎಂಬಾತನ ವಿಚಾರಣೆ ವೇಳೆ ಶೀನಾ ಬೋರಾ ಕೊಲೆ ಸಂಗತಿ ಬಯಲಿಗೆ ಬಂದಿತ್ತು.
2012ರ ಏಪ್ರಿಲ್‌ನಲ್ಲಿ ಇಂದ್ರಾಣಿ ಮುಖರ್ಜಿ, ಸಂಜೀವ್ ಖನ್ನಾ ಹಾಗೂ ಶ್ಯಾಮವರ್ ರೈ ಕಾರಿನಲ್ಲಿ ಶೀನಾ ಬೋರಾ ಕತ್ತು ಹಿಸುಕಿ ಕೊಲೆ ಮಾಡಿದ್ದರು. ಬಳಿಕ ರಾಯಗಡ ಜಿಲ್ಲೆಯ ಕಾಡೊಂದರಲ್ಲಿ ಆಕೆಯ ಮೃತದೇಹವನ್ನು ಸುಟ್ಟುಹಾಕಿದ್ದರು ಎಂಬ ಆರೋಪವಿದೆ.

ಇವಿಷ್ಟು ಘಟನೆಯ ಹಿನ್ನೆಲೆ. ಆದರೆ ಇದೀಗ ಈ ಕೇಸ್‌ಗೆ ಭಾರಿ ಟ್ವಿಸ್ಟ್‌ ಬಂದಿರುವುದು ಇಂದ್ರಾಣಿ ಮುಖರ್ಜಿ ಸಿಬಿಐಗೆ ಬರೆದಿರುವ ಪತ್ರದ ಮೂಲಕ.

ಆಕೆ ಸಿಬಿಐಗೆ ಪತ್ರ ಬರೆದಿದ್ದು, ಅದರಲ್ಲಿ ಶೀನಾ ಬೋರಾ ಸತ್ತಿಲ್ಲ, ನಾವು ಆಕೆಯನ್ನು ಕೊಲೆ ಮಾಡಲಿಲ್ಲ. ಆಕೆ ಕಾಶ್ಮೀರದಲ್ಲಿ ಜೀವಂತವಾಗಿದ್ದಾಳೆ ಎಂದು ಇಂದ್ರಾಣಿ ಮುಖರ್ಜಿ ಪತ್ರ ಬರೆದಿದ್ದಾರೆ. ಕಾಶ್ಮೀರದಲ್ಲಿ ಮಹಿಳೆಯೊಬ್ಬರು ಶೀನಾ ಬೋರಾಳನ್ನು ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಆಕೆಯನ್ನು ಪತ್ತೆ ಮಾಡಿ ಕರೆತನ್ನಿ ಎಂದು ಮನವಿ ಮಾಡಿಕೊಂಡಿದ್ದಾಳೆ.
ಇದೀಗ ಸಿಬಿಐಗೆ ತಲೆಬಿಸಿ ತಂದಿದ್ದು, ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net