ರಾತ್ರೋರಾತ್ರಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇಕೆ? ವರ್ಷದ ಬಳಿಕ ಮೌನ ಮುರಿದ ಗುಜರಾತ್​ ಮಾಜಿ ಮುಖ್ಯಮಂತ್ರಿ!

roopani
Published on

ನವದೆಹಲಿ: ಕಳೆದ ವರ್ಷದ ಸೆಪ್ಟೆಂಬರ್​ 11ರಂದು ಗುಜರಾತ್ ಮುಖ್ಯಮಂತ್ರಿ ಸ್ಥಾನದಿಂದ ವಿಜಯ್ ರೂಪಾನಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ಮಾತನಾಡಿದ್ದ ಅವರು, 'ಗುಜರಾತ್ ಪ್ರಗತಿಗೆ ಹೊಸ ನಾಯಕತ್ವ ಬರಬೇಕೆಂದು ನಾನು ನಂಬುತ್ತೇನೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಹೇಳಿದ್ದರು. ಆದರೆ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ನಡುವೆಯೇ ರಾತ್ರೋರಾತ್ರಿ ಈ ನಿರ್ಧಾರ ತೆಗೆದುಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಘಟನೆ ನಡೆದು ವರ್ಷವೇ ಉರುಳಿ ಹೋಗಿದೆ. ಆದರೆ ಇಲ್ಲಿಯವರೆಗೂ ಈ ರಾಜೀನಾಮೆಯ ರಹಸ್ಯವನ್ನು ರಹಸ್ಯವಾಗಿಯೇ ಇಟ್ಟಿದ್ದರು ರೂಪಾಯಿ. ಆದರೆ ವರ್ಷದ ಬಳಿಕ ಸಂದರ್ಶನವೊಂದರಲ್ಲಿ ಆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

ಆದರೆ ಅವರು ಕೊಟ್ಟ ಹೇಳಿಕೆ ಮಾತ್ರ ತುಂಬಾ ಕುತೂಹಲಕಾರಿಯಾಗಿದೆ. ಅದೇನೆಂದರೆ, ರಾಜೀನಾಮೆ ಕೊಟ್ಟಿದ್ದೇಕೆ ಎಂದು ಕೇಳಿದ ಪ್ರಶ್ನೆಗೆ ರೂಪಾನಿ ಅವರು, 'ಇನ್ನು ಹೈಕಮಾಂಡ್‌ಗೆ ನಾನು ಕಾರಣ ಕೇಳಲಿಲ್ಲ, ಯಾರೂ ಕಾರಣ ಹೇಳಿಲ್ಲ' ಎಂದಿದ್ದಾರೆ! 'ರಾಜೀನಾಮೆ ನೀಡುವ ಹಿಂದಿನ ರಾತ್ರಿ ಬಿಜೆಪಿಯ ಹೈಕಮಾಂಡ್ ನನ್ನ ಬಳಿ ಬಂದು ರಾಜೀನಾಮೆ ನೀಡುವಂತೆ ಕೇಳಿಕೊಂಡಿತ್ತು. ನಾನು ಕಾರಣ ಕೇಳಲಿಲ್ಲ, ಅವರೂ ಹೇಳಲಿಲ್ಲ. ಅವರ ಮಾತನ್ನು ಕೇಳಿ ನಾನು ಮರುದಿನ ರಾಜೀನಾಮೆ ಕೊಟ್ಟೆ' ಎಂದಿದ್ದಾರೆ.

'ನಾನು ಕಾರಣವನ್ನು ಕೇಳಿದ್ದರೆ ಅವರು ನನಗೆ ಕಾರಣವನ್ನು ಹೇಳುತ್ತಿದ್ದರು ಎನ್ನುವುದು ನನಗೆ ಗೊತ್ತು. ಆದರೆ ನಾನು ಯಾವಾಗಲೂ ಪಕ್ಷದ ಶಿಸ್ತಿನ ಕಾರ್ಯಕರ್ತ. ನಾನು ಯಾವತ್ತೂ ಪಕ್ಷ ಕೇಳಿದ್ದನ್ನೇ ಮಾಡಿದ್ದೇನೆ. ಪಕ್ಷ ನನಗೆ ಮುಖ್ಯಮಂತ್ರಿಯಾಗಲು ಆದೇಶ ನೀಡಿದಾಗ ಸಂತೋಷದಿಂದ ಒಪ್ಪಿದ್ದೆ. ಅಷ್ಟೇ ಸಂತೋಷದಿಂದ ರಾಜೀನಾಮೆಯನ್ನೂ ನೀಡಿದೆ. ಯಾವುದೇ ವಿರೋಧ ತೋರಿಸದೆ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರಿಗೆ ರಾಜೀನಾಮೆ ಸಲ್ಲಿಸಿದೆ ಅಷ್ಟೇ. ಈ ಬಗ್ಗೆ ಕಾರಣ ಕೇಳಿಲ್ಲ, ಹೇಳಲಿಲ್ಲ' ಎಂದರು.

ರೂಪಾನಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದ ಒಂದು ವರ್ಷದ ನಂತರ, ಬಿಜೆಪಿ ಅವರನ್ನು ಪಂಜಾಬ್‌ನ ಉಸ್ತುವಾರಿಯನ್ನಾಗಿ ನೇಮಿಸಿದೆ. 'ಪಕ್ಷವು ನನಗೆ ಮೊದಲು ನಗರ ಮಟ್ಟದಲ್ಲಿ, ನಂತರ ಪ್ರಾದೇಶಿಕ ಮಟ್ಟದಲ್ಲಿ ಕೆಲಸ ನೀಡಿದ್ದು, ಅದರಂತೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನೀಡಿ ಕೊನೆಗೂ ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕಿತು. ಈಗ ನನಗೆ ರಾಷ್ಟ್ರಮಟ್ಟದಲ್ಲಿ ಹೊಸ ಜವಾಬ್ದಾರಿಯನ್ನು ವಹಿಸಲಾಗಿದೆ' ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net