ಆ ಒಬ್ಬಳಿಗಾಗಿ 53 ಮಂದಿಯನ್ನು ಮದ್ವೆಯಾದ! 'ಶತಮಾನದ ದೊಡ್ಡ ಬಹುಪತ್ನಿತ್ವವಾದಿ'ಯ ಕಥೆ ಕೇಳಿ...

soudi
Published on

ಸೌದಿ: ಹಿಂದೂ ಸಂಪ್ರದಾಯದ ಪ್ರಕಾರ ಓರ್ವ ಪುರುಷನಿಗೆ, ಒಬ್ಬಳು ಪತ್ನಿ. ಮುಸ್ಲಿಂ ಕಾನೂನಿನ ಅನ್ವಯ ಒಬ್ಬ ಪುರುಷ ನಾಲ್ವರು ಪತ್ನಿಯರನ್ನು ಹೊಂದಬಹುದು. ಆದರೆ ಇಲ್ಲೊಬ್ಬ ಆಸಾಮಿ ಬರೋಬ್ಬರಿ 53 ಮಂದಿ ಮಹಿಳೆಯರನ್ನು ಮದುವೆಯಾಗಿದ್ದಾನೆ.

63 ವರ್ಷ ವಯಸ್ಸಿನ ಅಬು ಅಬ್ದುಲ್​ ಈ ಪರಿ ಮದುವೆಯಾಗಿರುವಾತ. ಈ ಮೂಲಕ ಈತ ಸದ್ಯದವರೆಗಿನ "ಶತಮಾನದ ದೊಡ್ಡ ಬಹುಪತ್ನಿತ್ವವಾದಿ" ಎಂದು ಕರೆಯಲ್ಪಟ್ಟಿದ್ದಾನೆ. 20ನೇ ವಯಸ್ಸಿನಿಂದಲೇ ಮದುವೆಯಾಗಲು ಶುರು ಮಾಡಿರುವ ಅಬು ಇಲ್ಲಿಯವರೆಗೆ 53 ಮಂದಿಯನ್ನು ಮದುವೆಯಾಗಿದ್ದಾನೆ.

ಇಷ್ಟೊಂದು ಮದುವೆಯಾಗಲು ಕಾರಣವೇನು ಎಂದು ಈತನನ್ನು ಕೇಳಿದಾಗ ಹೇಳಿದ್ದೇನು ಗೊತ್ತಾ? 'ನನಗೆ ಇಷ್ಟೊಂದು ಮದುವೆಯಾಗಲು ಇಷ್ಟವಿರಲಿಲ್ಲ. ಆದರೆ ಇದುವರೆಗೆ ನನಗೆ ಪರ್ಫೆಕ್ಟ್​ ಎನಿಸುವ ಪತ್ನಿ ಸಿಗಲಿಲ್ಲ. ಇದೇ ಕಾರಣಕ್ಕೆ ನಾನು ಇಷ್ಟು ಮದುವೆಯಾಗಬೇಕಾಗಿ ಬಂತು' ಎಂದಿದ್ದಾನೆ.

ಅಂದಹಾಗೆ ಇಷ್ಟೆಲ್ಲಾ ಪತ್ನಿಯರು ಇದ್ದರೂ ಈತ ಜೀವಮಾನವಿಡೀ ಒಬ್ಬ ಮಹಿಳೆಯೊಂದಿಗೆ ಕಳೆಯಲು ಬಯಸುತ್ತಾನಂತೆ, ಆ ಒಬ್ಬಳಿಗಾಗಿ ಇಷ್ಟೆಲ್ಲಾ ಮದುವೆಯಾಗಿದ್ದಾನಂತೆ! ಇತ್ತೀಚೆಗೆ ಸೌದಿ ಒಡೆತನದ ಟಿವಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಅಂತರಂಗವನ್ನು ಈತ ಬಿಚ್ಚಿಟ್ಟಿದ್ದಾನೆ.

'ನನಗೆ ಒಬ್ಬಾಕೆ ಮಾತ್ರ ಪರಿಪೂರ್ಣ ಮಹಿಳೆ ಸಿಗಬೇಕಿದೆ. ಆಕೆ ಸಿಕ್ಕರೆ ಜೀವನಪೂರ್ತಿ ಅವಳೊಬ್ಬಳ ಜತೆ ಬದುಕಲು ಇಚ್ಛಿಸುತ್ತೇನೆ. ಅಂಥ ಆದರ್ಶ ಸ್ತ್ರೀ ಸಂಗಾತಿಯನ್ನು ಹುಡುಕಿಕೊಂಡು ತಾನು ಅನೇಕ ಬಾರಿ ಮದುವೆಯಾಗಿದ್ದೇನೆ' ಎಂದಿದ್ದಾನೆ ಅಬು.

ತನ್ನ ಮದುವೆಯ ಪಯಣದ ಕುರಿತು ಈತ ಹೇಳಿಕೊಂಡಿರೋದು ಹೀಗೆ: "ನಾನು ಇಲ್ಲಿಯವರೆಗೂ 53 ಮಂದಿಯನ್ನು ಮದುವೆಯಾಗಿದ್ದೇನೆ. ಮೊದಲ ಮದುವೆಯಾದಾಗ ನನಗೆ 20 ವರ್ಷ. ಮೊದಲ ಪತ್ನಿಗೆ ಆಗ 26 ವರ್ಷ. ಅಂದರೆ ಆರು ವರ್ಷ ದೊಡ್ಡವಳು. ಆ ಸಂದರ್ಭದಲ್ಲಿ ನನಗೆ ಎರಡನೆಯ ಮದುವೆಯ ಬಗ್ಗೆಯೂ ಯೋಚನೆ ಇರಲಿಲ್ಲ. ಆದರೆ ಮೊದಲಿನಾಕೆ ನನಗೆ ಪರ್ಫೆಕ್ಟ್​ ಅಲ್ಲ ಎನಿಸಿ, ಮತ್ತೊಂದು ಮದುವೆಯಾದೆ. ಅಗ ನನಗೆ 23 ವರ್ಷ ವಯಸ್ಸು. ಅದಾಗಲೇ ಒಂದು ಮಗುವಿನ ತಂದೆಯಾಗಿದ್ದೆ. ಎರಡನೇ ಮದುವೆಯಲ್ಲಿಯೂ ಸಂತೋಷ ಸಿಗಲಿಲ್ಲ. ಮೊದಲ ಮತ್ತು ಎರಡನೆಯ ಹೆಂಡತಿಯರ ನಡುವೆ ಜಗಳ ಶುರುವಾಯಿತು. ಆದ್ದರಿಂದ ಪುನಃ ಪುನಃ ವಿವಾಹವಾಗಬೇಕಾಗಿ ಬಂತು' ಎಂದಿದ್ದಾನೆ ಈತ!

‘ಅನೇಕ ಮಹಿಳೆಯರನ್ನು ವಿವಾಹವಾದರೂ ಯಾವುದೇ ಹೆಂಡತಿಯರೊಂದಿಗೆ ಅನ್ಯಾಯವಾಗಿ ವರ್ತಿಸಲಿಲ್ಲ. ಕೇವಲ ಒಂದೇ ಒಂದು ರಾತ್ರಿಯಲ್ಲಿ ಮದುವೆ ಮುರಿದುಬಿದ್ದದ್ದೂ ಇದೆ. ಹೆಚ್ಚಾಗಿ ಸೌದಿ ಮಹಿಳೆಯರನ್ನು ಮದುವೆಯಾಗಿದ್ದೇನೆ. ಇದರ ಹೊರತಾಗಿ ವಿದೇಶ ಪ್ರವಾಸಗಳ ಸಮಯದಲ್ಲಿ ಕೆಲವು ವಿದೇಶಿ ಮಹಿಳೆಯರನ್ನೂ ಮದುವೆಯಾಗಿದ್ದೇನೆ' ಎಂದಿರುವ ಅಬು, ವಿದೇಶದಲ್ಲಿದ್ದಾಗ ಪಾಪ ಮಾಡುವುದರಿಂದ ರಕ್ಷಿಸಿಕೊಳ್ಳಲು ಮದುವೆಯಾಗಿರುವುದಾಗಿ ಹೇಳಿದ್ದಾನೆ.

ಇಷ್ಟು ಮದುವೆಯ ಬಳಿಕ "ಫರ್ಫೆಕ್ಟ್​ ಪತ್ನಿ" ಸಿಕ್ಕಳೋ ಇಲ್ಲವೋ ಎಂಬ ವಿಷಯ ಸದ್ಯ ಅಬು ಅಬ್ದುಲ್​ ತಿಳಿಸಿಲ್ಲ (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net