

ಕೇಂದು (ಬಿಹಾರ): ಮದುವೆ ಇರುವ ಮನೆಯಲ್ಲಿ ಯಾರಾದರೂ ಮೃತಪಟ್ಟರೆ ಮದುವೆ ಕ್ಯಾನ್ಸಲ್ ಆಗುವುದು ಇಲ್ಲವೇ ಮುಂದೂಡುವುದು ಸಹಜ. ಆದರೆ ಇಲ್ಲೊಂದು ಕಡೆ, ಮನೆಯಲ್ಲಿ ಅಮ್ಮ ಮೃತಪಟ್ಟರೂ, ಮಂಟಪಕ್ಕೆ ಹೋಗಿ ಮಗ ಮದುವೆಯಾಗಿದ್ದು ಭಾರಿ ಸುದ್ದಿಯಾಗಿದೆ.
ಹಾಗೆಂದು ಇವನೆಂಥ ಮಗನೆಂದು ದೂರಬೇಡಿ. ಈ ಮದುವೆಯಾಗಲು ಕಾರಣವೂ ಆ ಮೃತ ತಾಯಿಯೇ. ಇಂಥದ್ದೊಂದು ಘಟನೆ ನಡೆದಿರುವುದು ಬಿಹಾರದ ಕೇಂದು ಆಡೀಹ್ ಠಾಣೆ ವ್ಯಾಪ್ತಿಯ ನ್ಯೂ ಮೆರಿನ್ ಗೋಪಾಲೀಚಕ್ ಪ್ರದೇಶದಲ್ಲಿ. ಹೀಗೆ ತಾಯಿಯ ಶವ ಮನೆಯಲ್ಲಿ ಇರಿಸಿ ಮದುವೆಯಾದ ಯುವಕನ ಹೆಸರು ಓಂ ಕುಮಾರ್.
ಈತನ ಮದುವೆ ನೋಡಲು ತಾಯಿ ಬಹಳ ಉತ್ಸುಕರಾಗಿದ್ದರು. ಮಗನ ಮದುವೆಯನ್ನು ಸರೋಜ್ ಎಂಬಾಕೆಯ ವಿಜೃಂಭಣೆಯಿಂದ ಮಾಡಲು ಎಲ್ಲಾ ರೀತಿಯ ತಯಾರಿ ನಡೆಸಿದ್ದರು. ಗ್ರಾಮಸ್ಥರಿಗೆಲ್ಲಾ ಆಹ್ವಾನ ನೀಡಲಾಗಿತ್ತು. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಅವರು. ತಾವು ಮಗನ ಮದುವೆಯ ತನಕ ಬದುಕುತ್ತೇನೋ ಇಲ್ಲವೋ ಎಂಬ ಸಂದೇಹ ಅವರಿಗೆ ಇತ್ತು. ಇದೇ ಕಾರಣಕ್ಕೆ ತಾವು ಮೃತಪಟ್ಟರೂ ಅದ್ಧೂರಿಯಾಗಿಯೇ ಮದುವೆಯಾಗಬೇಕು ಎಂದು ಮಗನ ಬಳಿ ಪ್ರಮಾಣ ಮಾಡಿಸಿಕೊಂಡಿದ್ದರು. ಚಿತೆಯೇರುವ ಮುನ್ನ ಮಗನ ಮದುವೆ ನೋಡಬೇಕು ಎಂದು ಪದೇ ಪದೇ ಹೇಳುತ್ತಿದ್ದರಂತೆ.
ಮದುವೆ ಜುಲೈ 10ರಂದು ನಿಗದಿಯಾಗಿತ್ತು. ಆದರೆ ಜುಲೈ 8ರಂದು ತಾಯಿ ಮೃತಪಟ್ಟಿದ್ದಾರೆ. ತನ್ನ ತಾಯಿಯ ಕೊನೆಯ ಆಸೆಯನ್ನು ಪೂರೈಸಲು, ತಾಯಿಯ ಶವವನ್ನು ಮನೆಯಲ್ಲೇ ಬಿಟ್ಟು ಮಗ ಮದುವೆಯಾಗಿದ್ದಾನೆ. ನಿಗದಿಯಂತೆ ಜುಲೈ 10ರಂದು ಮದುವೆಯಾದರೆ, ತಾಯಿಯ ಪಾದ ಮುಟ್ಟಿ ಇಬ್ಬರೂ ಆಶೀರ್ವಾದ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ, ಮದುವೆಯನ್ನು ಮೊದಲೇ ಮಾಡಿಕೊಂಡು ಮದುವೆಯ ಬಳಿಕ ಮನೆಯಲ್ಲಿದ್ದ ತಾಯಿಯ ಮೃತದೇಹದ ಪಾದ ಸ್ಪರ್ಶಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ತಾಯಿಯ ಪಾರ್ಥಿವ ಶರೀರದ ಪಾದಗಳನ್ನು ಎತ್ತಿ ತಲೆಯ ಮೇಲೆ ಇಟ್ಟು ಆಶೀರ್ವಾದ ಪಡೆದಿದ್ದಾರೆ ನವ ದಂಪತಿ. ಈ ಮೂಲಕ ಅಮ್ಮನ ಶರೀರವನ್ನು ಚಿತೆಗೆ ಏರಿಸುವ ಮುನ್ನ ಮದುವೆಯಾಗಿದ್ದಾನೆ ಮಗ. ಈ ಮದುವೆಗೆ ಗ್ರಾಮಸ್ಥರೆಲ್ಲರೂ ಸೇರಿದ್ದರಿಂದ ಮದುವೆ ಬಹಳ ವಿಜೃಂಭಣೆಯಿಂದ ನೆರವೇರಿಸಲಾಗಿದೆ.