

ಬೆಂಗಳೂರು: ಹಿರಿಯ ರಾಕೆಟ್ ವಿಜ್ಞಾನಿ, ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ(ಐಐಎಸ್ಸಿ) ವಿದ್ಯಾರ್ಥಿ ಎಸ್. ಸೋಮನಾಥ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ(ಇಸ್ರೋ) ಅಧ್ಯಕ್ಷರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇಸ್ರೋ ಅಧ್ಯಕ್ಷರಾಗಿರುವ ಕೆ. ಶಿವನ್ ಒಂದು ವರ್ಷದ ವಿಸ್ತರಣೆ ಬಳಿಕ ಜ.14ರಂದು ನಿವೃತ್ತರಾಗಲಿದ್ದು, ಅವರ ಸ್ಥಾನವನ್ನು ಸೋಮನಾಥ್ ಅಲಂಕರಿಸಲಿದ್ದಾರೆ. ಅಧ್ಯಕ್ಷ ಸ್ಥಾನದ ಜತೆಗೆ ಬಾಹ್ಯಾಕಾಶ ಇಲಾಖೆ ಕಾರ್ಯದರ್ಶಿಯಾಗಿಯೂ ನೇಮಕವಾಗಿದ್ದಾರೆ.
ಸೋಮನಾಥ್ ಅವರು 2018ರಿಂದ ತಿರುವನಂತಪುರದಲ್ಲಿರುವ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ ದ್ರವ ನೋದನ ವ್ಯವಸ್ಥಾ ಕೇಂದ್ರದ ನಿರ್ದೇಶಕರಾಗಿ ಹೊಣೆ ಹೊತ್ತಿದ್ದಾರೆ. ಇದಕ್ಕೂ ಮೊದಲು ವಿಎಸ್ಎಸ್ಸಿಯ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರಾಗಿ, ಬಾಹ್ಯಾಕಾಶ ಉಡಾವಣಾ ವಾಹನ ಜಿಎಸ್ಎಲ್ವಿ ಮಾರ್ಕ್-3 ಯೋಜನಾ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೊಲ್ಲಂನ ಟಿಕೆಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಾಂತ್ರಿಕ ವಿಭಾಗದಲ್ಲಿ ಪದವಿ ಪಡೆದು, ನಂತರ ಬೆಂಗಳೂರಿನ ಐಐಎಸ್ಸಿಯಲ್ಲಿ ವೈಮಾನಿಕ ಇಂಜಿನಿಯರಿಂಗ್ ವಿಭಾಗದ ಸಂರಚನೆ, ಬಲವಿಜ್ಞಾನ ಹಾಗೂ ನಿಯಂತ್ರಣ ವಿಷಯದ ವಿಶೇಷತೆಯೊಂದಿಗೆ ಚಿನ್ನದ ಪದಕ ಪಡೆದು ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.
1985ರಲ್ಲಿ ವಿಎಸ್ಎಸ್ಸಿ ಸೇರ್ಪಡೆಯಾದ ಸೋಮನಾಥ್, ಪಿಎಸ್ಎಲ್ವಿ ಪ್ರಾರಂಭಿಕ ಅವಧಿಯಲ್ಲಿ ಯೋಜನೆಯ ನೇತೃತ್ವ ವಹಿಸಿದ್ದರು. ಸಿಸ್ಟಂ ಇಂಜಿನಿಯರಿಂಗ್, ಉಡಾವಣಾ ವಾಹನ ವಿಷೇಶಜ್ಞರಾಗಿರುವ ಅವರು, ಚಂದ್ರಯಾನ-2 ಯೋಜನೆ ಲ್ಯಾಂಡರ್ ಎಂಜಿನ್ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಭಾರತೀಯ ಅಂತರಿಕ್ಷ ಸೊಸೈಟಿಯಿಂದ ‘ಸ್ಪೇಸ್ ಗೋಲ್ಡ್ ಮೆಡಲ್’ ಸೇರಿ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ.