

ತೆಲಂಗಾಣ: ಇದು ಮ್ಯಾಚಿಂಗ್ ಸೀರೆ ಅಲ್ಲದಿರಬಹುದು, ಆದರೆ ಮ್ಯಾಚ್ಬಾಕ್ಸ್ ಸೀರೆಯಂತೂ ಹೌದು. ಮಾತ್ರವಲ್ಲ, ಇದು ಹಾಟೆಸ್ಟ್ ಸೀರೆ ಎಂದರೂ ತಪ್ಪೇನಲ್ಲ. ಏಕೆಂದರೆ ಇಡೀ ಸೀರೆಯನ್ನು ಒಂದು ಬೆಂಕಿಪೊಟ್ಟಣದ ಒಳಗಿಟ್ಟುಕೊಂಡು ಒಯ್ಯಬಹುದು.
ನಲ್ಲ ವಿಜಯ್ ಎಂಬವರು ಇಂಥದ್ದೊಂದು ವಿಶಿಷ್ಟ ಸೀರೆಯನ್ನು ಕೈಮಗ್ಗದ ಮೂಲಕ ನೇಯ್ದಿದ್ದಾರೆ. ಒಂದು ಬೆಂಕಿಪೊಟ್ಟಣದ ಒಳಗಿಟ್ಟು ಒಯ್ಯಬಹುದಾದ ಈ ಸೀರೆಯನ್ನು ತೆಲಂಗಾಣದ ಸಚಿವರಾದ ಕೆ.ಟಿ. ರಾಮರಾವ್, ಎರ್ರಬೆಲ್ಲಿ ದಯಾಕರ್ ರಾವ್, ವಿ.ಶ್ರೀನಿವಾಸ್ ಗೌಡ್ ಮತ್ತು ಸಬಿತಾ ರೆಡ್ಡಿ ಮುಂತಾದವರ ಸಮ್ಮುಖದಲ್ಲಿ ಇಲ್ಲಿನ ಸಿರಿಸಿಲ್ಲದ ಯುವನೇತಾರರಾಗಿರುವ ನಲ್ಲ ವಿಜಯ್ ಅನಾವರಣಗೊಳಿಸಿದರು.
ನಲ್ಲ ವಿಜಯ್ ಈ ಸೀರೆಯನ್ನು ಬರೀ ಆರು ದಿನಗಳಲ್ಲಿ ನೇಯ್ಗೆ ಮಾಡಿದ್ದು, ಇದಕ್ಕೆ ಸಾಂಪ್ರದಾಯಿಕ ಮಗ್ಗದಲ್ಲಿ 12 ಸಾವಿರ ರೂಪಾಯಿ ಖರ್ಚು ತಗುಲಿದೆ. ಇದನ್ನೇ ಯಾಂತ್ರಿಕ ಮಗ್ಗದಲ್ಲಿ ಮಾಡಿದರೆ 8 ಸಾವಿರ ರೂ. ಖರ್ಚಿನಲ್ಲಿ ಮಾಡಬಹುದು ಎಂದು ಅವರು ವಿವರಣೆ ನೀಡಿದರು. ಈ ವಿಶಿಷ್ಟ ಸೀರೆಯನ್ನು ನೇಯ್ಗೆ ಮಾಡಿರುವವರಿಗೆ ಸಚಿವರು ಮೆಚ್ಚುಗೆ ಸೂಚಿಸಿದರು.