

ಕಾನ್ಪುರ: ಆರು ವರ್ಷದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಬಾಲಕಿಯ ಅನೇಕ ಅಂಗಗಳು ನಾಪತ್ತೆಯಾಗಿದ್ದು, ಇದು ನರಬಲಿಗಾಗಿ ನಡೆದಿರುವ ಕೊಲೆ ಎಂದು ಸಂದೇಹ ವ್ಯಕ್ತವಾಗಿದೆ.
ಬಾಲಕಿ ಭದ್ರಾಸ್ ಗ್ರಾಮದ ನಿವಾಸಿ ಎನ್ನಲಾಗಿದೆ. ಪಟಾಕಿ ಖರೀದಿಗೆಂದು ಬಾಲಕಿ ಹೋಗಿದ್ದಳು. ತಡರಾತ್ರಿಯಾದರೂ ಮನೆಗೆ ಬಾರದಾಗ ಭಯಗೊಂಡ ಪಾಲಕರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ.
ನಂತರ ಕಾಳಿ ದೇವಾಲಯದ ಪೊದೆಯ ಬಳಿ ಬಾಲಕಿಯ ಶವ ಪತ್ತೆಯಾಗಿದೆ. ಪೊಲೀಸರು ಶವದ ಪರೀಕ್ಷೆ ನಡೆಸಿದಾಗ ಭೀಕರವಾಗಿ ಕೊಲೆಯಾಗಿರುವುದು ತಿಳಿದಿದೆ. ಯಾವುದೇ ಕಾಡುಪ್ರಾಣಿ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿತ್ತು. ಆದರೆ ನಂತರ ಬಾಲಕಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅನೇಕ ಅಂಗಾಂಗಗಳು ನಾಪತ್ತೆಯಾಗಿರುವುದು ಕಾಣಿಸಿದೆ. ಶ್ವಾಸಕೋಶ ಕೂಡ ಕಣ್ಮರೆಯಾಗಿದೆ!
ಅದನ್ನು ಪರಿಶೀಲಿಸಿದಾಗ ಹಾಗೂ ಕಾಳಿ ದೇವಿಯ ದೇವಾಲಯದ ಸಮೀಪ ಬಾಲಕಿಯ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇದು ನರಬಲಿ ಇರಬಹುದು ಎಂದು ಊಹಿಸಲಾಗಿದೆ.
ಸಾವು ಹೇಗೆ ಸಂಭವಿಸಿದೆ ಎಂಬ ಬಗ್ಗೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಇದು ಪ್ರಾಣಿಯ ದಾಳಿಯೋ ಅಥವಾ ನರಬಲಿಗಾಗಿ ನಡೆದಿರುವ ಹತ್ಯೆಯೋ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಬಾಲಕಿಯ ಮರಣೋತ್ತರ ಪರೀಕ್ಷೆ ಬಂದ ಮೇಲೆ ಸ್ಪಷ್ಟ ಚಿತ್ರಣ ಸಿಗಲಿದೆ. ಅಪರಾಧಿಗಳನ್ನು ಸುಲಭದಲ್ಲಿ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಇನ್ಸ್ಪೆಕ್ಟರ್ ಬ್ರಿಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.
ಬಾಲಕಿಯ ಸಾವಿನ ನಂತರ ಗ್ರಾಮದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.