

ಹರಿಯಾಣ: ಬಿಜೆಪಿಯ ಮಾಜಿ ಸಂಸದ ಶರದ್ ತ್ರಿಪಾಠಿ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರಿಗೆ 49 ವರ್ಷ ವಯಸ್ಸಾಗಿದೆ.
ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಯಿಂದ ಇವರು ಕೆಲ ವರ್ಷಗಳಿಂದ ಬಳಲುತ್ತಿದ್ದರು. ಸಮಸ್ಯೆ ಉಲ್ಭಣಿಸಿದ್ದರಿಂದ ಹರಿಯಾಣದ ಮೇದಾಂತ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ತ್ರಿಪಾಠಿ 2014ರಲ್ಲಿ ಉತ್ತರ ಪ್ರದೇಶದ ಸಂತ ಕಬೀರ್ ನಗರದ ಲೋಕಸಭಾ ಸ್ಥಾನದಿಂದ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು. ಇವರ ನಿಧನರಾಗಿರುವುದಕ್ಕೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಸಂತಾಪ ಸೂಚಿಸಿದ್ದಾರೆ. ಶರದ್ ತ್ರಿಪಾಠಿಯವರ ಅಕಾಲಿಕ ನಿಧನವು ನನ್ನನ್ನು ಮಾತ್ರವಲ್ಲದೇ ಇನ್ನೂ ಅನೇಕರಿಗೆ ದುಃಖ ತರಿಸಿದೆ. ಅವರು ಸಮಾಜಕ್ಕೆ ಸೇವೆ ಸಲ್ಲಿಸುವ ಹಾಗೂ ದೀನ ದಲಿತರಿಗಾಗಿ ಕೆಲಸ ಮಾಡುಲು ಇಷ್ಟಪಟ್ಟವರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಅವರ ಸಾವನ್ನು ತಡೆಕೊಳ್ಳುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಟ್ವಿಟರ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಇವರು ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.