ಭಾರತದ ಅಟಾರ್ನಿ ಜನರಲ್​ ಆಗಿ ಹಿರಿಯ ವಕೀಲ ವೆಂಕಟರಮಣಿ ನೇಮಕ: ಏನಿದು ಹುದ್ದೆ? ಇವರ ಕರ್ತವ್ಯಗಳೇನು?

venkataramani
Published on

ನವದೆಹಲಿ: ಭಾರತದ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ​ ಆರ್.ವೆಂಕಟರಮಣಿ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಪ್ರಸ್ತುತ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರ ಸೇವೆ ಜೂನ್ 30 ರಂದು ಕೊನೆಗೊಂಡಿದೆ, ಆದರೆ ಅವರ ಸೇವೆಯನ್ನು ಸೆ.30ರ ವರೆಗೆ ವಿಸ್ತರಿಸಲಾಗಿದೆ. ವೆಂಕಟರಮಣಿ ಅವರ ನೇಮಕವು ಮೂರು ವರ್ಷಗಳ ಅವಧಿಗೆ ಇರಲಿದೆ. ಕೆಲವು ದಿನಗಳ ಹಿಂದೆಯೇ ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರು ಅಟಾರ್ನಿ ಜನರಲ್‌ ಆಗಿ ನೇಮಿಸುವ ಸರಕಾರದ ಪ್ರಸ್ತಾವವನ್ನು ನಯವಾಗಿಯೇ ತಿರಸ್ಕರಿಸಿದ್ದರು. ಹೀಗಾಗಿ ಸರಕಾರ ವೆಂಕಟರಮಣಿ ಅವರನ್ನು ಆಯ್ಕೆ ಮಾಡಿದೆ.

1950ರ ಏಪ್ರಿಲ್ 13ರಂದು ಪಾಂಡಿಚೆರಿಯಲ್ಲಿ ಜನಿಸಿದ ವೆಂಕಟರಮಣಿ, 1977ರಲ್ಲಿ ತಮಿಳುನಾಡಿನಲ್ಲಿ ವಕೀಲಿ ವೃತ್ತಿ ಆರಂಭಿಸಿದರು. 1979ರಲ್ಲಿ ಅವರು ಸುಪ್ರೀಂಕೋರ್ಟ್‌ ವಕೀಲರಾಗಿ ನೇಮಕವಾಗಿದ್ದರು. 1997ರಲ್ಲಿ ಅವರನ್ನು ಹಿರಿಯ ವಕೀಲರನ್ನಾಗಿ ಸುಪ್ರೀಂಕೋರ್ಟ್ ನೇಮಿಸಿತ್ತು.

ವೆಂಕಟರಮಣಿ ಅವರು ಕೇಂದ್ರ ಸರ್ಕಾರ, ವಿವಿಧ ರಾಜ್ಯ ಸರಕಾರಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ವಲಯಗಳ ಸಂಸ್ಥೆಗಳ ಪರ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಲ್ಲಿ ವಾದ ಮಂಡಿಸಿದ್ದಾರೆ. 2010ರಿಂದ 2013ರವರೆಗೆ ಭಾರತೀಯ ಕಾನೂನು ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅಟಾರ್ನಿ ಜನರಲ್ ಆಫ್​ ಇಂಡಿಯಾ ಕರ್ತವ್ಯವೇನು?

ಕೇಂದ್ರ ಸರ್ಕಾರದ ಪ್ರಮುಖ ಕಾನೂನು ಸಲಹೆಗಾರರಿಗೆ ‘ಅಟಾರ್ನಿ ಜನರಲ್ ಆಫ್‌ ಇಂಡಿಯಾ’ ಎನ್ನುತ್ತಾರೆ. ಇವರ ಪ್ರಮುಖ ಕರ್ತವ್ಯ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಇರುವ ಪ್ರಮುಖ ವಿಚಾರಣೆಯಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸುವುದು.

ಕೇಂದ್ರದ ವಿರುದ್ಧ ದೇಶದ ಯಾವುದೇ ಹೈಕೋರ್ಟ್‌ಗಳಲ್ಲಿ ನಡೆಯುವ ಪ್ರಕರಣಗಳಲ್ಲೂ ಇವರು ಕೇಂದ್ರದ ಪರವಾಗಿ ವಾದಿಸುವ ಅಧಿಕಾರ ಹೊಂದಿರುತ್ತಾರೆ. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಲು ಅರ್ಹತೆ ಇರುವ ಭಾರತದ ಪ್ರಜೆಯನ್ನು ಅಟಾರ್ನಿ ಜನರಲ್‌ ಆಗಿ ರಾಷ್ಟ್ರಪತಿಗಳು ನೇಮಿಸುತ್ತಾರೆ.

ರಾಷ್ಟ್ರಪತಿಗಳು ಇಚ್ಛಿಸುವವರೆಗೆ ಇವರು ತಮ್ಮ ಕರ್ತವ್ಯವನ್ನು ಮುಂದುವರಿಸಬಹುದು. ಸಂಸತ್ತಿನ ಉಭಯ ಸದನಗಳಲ್ಲಿ ಭಾಗವಹಿಸುವ ಅಧಿಕಾರ ಇವರಿಗೆ ಇದೆ (ಆದರೆ ಮತದಾನದ ಹಕ್ಕು ಇಲ್ಲ). ಇವರ ಸಂಬಳವನ್ನು ಕಾಲಕಾಲಕ್ಕೆ ಬದಲಾಯಿಸುವ ಅಧಿಕಾರ ಕೂಡ ರಾಷ್ಟ್ರಪತಿಗಳಿಗೆ ಇದೆ. ಸಾಮಾನ್ಯವಾಗಿ ಇವರಿಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಿಗೆ ನೀಡುವಷ್ಟು ಸಂಬಳವನ್ನು ನೀಡಲಾಗುತ್ತದೆ.

ಯಾವುದಾದರೂ ಕಾರಣಕ್ಕೆ ಇವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಇಚ್ಛಿಸದಿದ್ದಲ್ಲಿ ರಾಷ್ಟ್ರಪತಿಯವರಿಗೆ ರಾಜೀನಾಮೆ ಪತ್ರವನ್ನು ನೀಡಬೇಕಾಗುತ್ತದೆ. ಒಂದು ವೇಳೆ ಇವರು ಕರ್ತವ್ಯ ಸರಿಯಾಗಿ ನಿರ್ವಹಿಸುತ್ತಿಲ್ಲವೆಂದಾದಲ್ಲಿ ಇವರನ್ನು ಕೆಲಸದಿಂದ ವಜಾ ಮಾಡುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಆದರೆ ವಜಾ ಮಾಡುವ ಪ್ರಕ್ರಿಯೆ ಹಾಗೂ ವಜಾ ಮಾಡುವ ಕಾರಣಗಳ ಕುರಿತು ಸಂವಿಧಾನದಲ್ಲಿ ಯಾವುದೇ ಉಲ್ಲೇಖವಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net