More

    ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ದಸರಾ ಬಂಪರ್​: ತುಟ್ಟಿಭತ್ಯೆ ಹೆಚ್ಚಳ- ಹೀಗಿದೆ ಲೆಕ್ಕಾಚಾರ

    ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಬಂಪರ್​ ಕೊಡುಗೆ ಸಿಕ್ಕಿದ್ದು, ನೌಕರರ ಜತೆಗೆ ಪಿಂಚಣಿದಾರರ ತುಟ್ಟಿಭತ್ಯೆಯನ್ನು (ಡಿಎ) ಶೇ.4ರಷ್ಟು ಹೆಚ್ಚಿಸಲಾಗಿದೆ. ಶೇ.4ರಷ್ಟು ಡಿ.ಎ ಹೆಚ್ಚಳದಿಂದ ಕೇಂದ್ರ ಸರ್ಕಾರಿ ನೌಕರರಿಗೆ ನೀಡಲಾಗುವ ಒಟ್ಟು ಡಿ.ಎ ಶೇ.34ರಿಂದ ಶೇ.38ಕ್ಕೆ ಏರಿಕೆಗೊಂಡಂತೆ ಆಗಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ತುಟ್ಟಿಭತ್ಯೆ ಹೆಚ್ಚಳದ ಜಾರಿ ದಿನಾಂಕ ಜುಲೈ 1 ಆಗಿರುವುದರಿಂದ ಸಿಬ್ಬಂದಿಗೆ ಹಳೆ ಬಾಕಿಯೂ ಪಾವತಿಯಾಗಲಿದೆ.

    ಡಿ.ಎ ಹೆಚ್ಚಳದಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಇದು ನಾಗರಿಕ ಸೇವೆಗಳಲ್ಲಿರುವ ನೌಕರರು ಮತ್ತು ರಕ್ಷಣಾ ಸೇವೆಗಳಲ್ಲಿರುವ ಉದ್ಯೋಗಿಗಳಿಗೂ ಅನ್ವಯಿಸಲಿದೆ. ಸರ್ಕಾರವು ಸಾಮಾನ್ಯವಾಗಿ ಜನವರಿ ಮತ್ತು ಜುಲೈ ತಿಂಗಳಲ್ಲಿ ಎರಡು ಬಾರಿ ಡಿ.ಎ ಪರಿಷ್ಕರಿಸುತ್ತದೆ. ಈಗ ಜುಲೈ ತಿಂಗಳಿಂದ ಪೂರ್ವನ್ವಯವಾಗುವಂತೆ ಡಿ.ಎ ಘೋಷಿಸಲಾಗಿದೆ. ರಾಜ್ಯ ಸರ್ಕಾರಗಳೂ ಇದನ್ನು ಅನುಸರಿಸುವ ಸಾಧ್ಯತೆ ಇದೆ.

    ಈ ಹಿಂದೆ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು (ಡಿಆರ್) ಮೂಲ ವೇತನದ ಶೇ. 31ರಿಂದ ಶೇ. 34 ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿತ್ತು. ಇದು ಜನವರಿ 1, 2022ರಿಂದ ಜಾರಿಗೆ ಬಂದಿತ್ತು. ಆ ಸಂದರ್ಭದಲ್ಲಿ ಸರ್ಕಾರವು ನೌಕರರಿಗೆ ಮೂರು ತಿಂಗಳ ಬಾಕಿ ವೇತನವನ್ನೂ ಪಾವತಿಸಿತ್ತು.

    ಲೆಕ್ಕಾಚಾರ ಹೇಗೆ?
    ಒಂದು ವೇಳೆ ಮೂಲ ವೇತನ 18 ಸಾವಿರ ರೂ. ಆಗಿದ್ದರೆ 720 ರೂ. ಡಿ.ಎ ಹೆಚ್ಚಳವಾಗಲಿದೆ. ಮೂಲ ವೇತನ 25 ಸಾವಿರ ರೂ. ಆಗಿದ್ದರೆ ಈ ಹೆಚ್ಚಳವು ತಿಂಗಳಿಗೆ 1,000 ರೂ. ಆಗಿರುತ್ತದೆ. ಅದೇ ರೀತಿ 50 ಸಾವಿರ ರೂ. ಮೂಲ ವೇತನ ಪಡೆಯುತ್ತಿದ್ದವರಿಗೆ ಈಗ ತಿಂಗಳಿಗೆ 2,000 ರೂ. ಹಾಗೂ 1,00,000 ರೂ. ಮೂಲ ವೇತನ ಹೊಂದಿರುವವರಿಗೆ ಶೇ. 4ರಷ್ಟು ತುಟ್ಟಿಭತ್ಯೆ ಹೆಚ್ಚಳದ ನಂತರ ಒಟ್ಟು ವೇತನದಲ್ಲಿ 4,000 ರೂ. ಲಾಭ ಸಿಗಲಿದೆ.

    2019ರ ಡಿಸೆಂಬರ್ 31 ರವರೆಗೆ 7 ನೇ ವೇತನ ಆಯೋಗದ ಆಧಾರದ ಮೇಲೆ ಎಲ್ಲಾ ಉದ್ಯೋಗಿಗಳು ಶೇ. 17ರ ದರದಲ್ಲಿ ತುಟ್ಟಿ ಭತ್ಯೆಯನ್ನು ಪಡೆಯುತ್ತಿದ್ದರು. ಇದರ ನಂತರ ಒಂದೂವರೆ ವರ್ಷಗಳವರೆಗೆ ಕೋವಿಡ್ ಕಾರಣದಿಂದಾಗಿ ಯಾವುದೇ ಹೆಚ್ಚಳ ಅಥವಾ ಪರಿಷ್ಕರಣೆ ಆಗಿರಲಿಲ್ಲ. 2021ರ ಜುಲೈನಲ್ಲಿ ತುಟ್ಟಿಭತ್ಯೆಯನ್ನು ಶೇ. 11ರಷ್ಟು ಹೆಚ್ಚಿಸಿ ಶೇ. 28ಕ್ಕೆ ಏರಿಕೆ ಮಾಡಲಾಯಿತು. ಅದೇ ಸಾಲಿನ ಅಕ್ಟೋಬರ್​ನಲ್ಲಿ ಶೇ. 3ರಷ್ಟು ಹೆಚ್ಚಿಸಲಾಯಿತು. ಜುಲೈ 1, 2021 ರಿಂದ ಎಲ್ಲಾ ಕೇಂದ್ರ ಸರಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಶೇ. 31ರಷ್ಟಿತ್ತು.

    ಇದೇ ಜನವರಿಯಲ್ಲಿ ತುಟ್ಟಿಭತ್ಯೆಯನ್ನು ಶೇ. 3 ರಷ್ಟು ಹೆಚ್ಚಿಸಲಾಯಿತು. ಇದೀಗ ಮತ್ತೆ ಶೇ. 4ರಷ್ಟು ಏರಿಕೆ ಮಾಡಿರುವುದರಿಂದ ತುಟ್ಟಿಭತ್ಯೆಯು ಮೂಲ ವೇತನದ ಶೇ. 38ಕ್ಕೆ ತಲುಪಿದೆ. (ಏಜೆನ್ಸೀಸ್​)

    ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರಿಗೆ ದಸರಾ ಬಂಪರ್​: ತುಟ್ಟಿಭತ್ಯೆ ಹೆಚ್ಚಳ- ಹೀಗಿದೆ ಲೆಕ್ಕಾಚಾರ

    ಬಿಜೆಪಿಯ ಕೈ ಹಿಡಿದ ‘ಸೋಲಿಲ್ಲದ ಸರದಾರ’! ನಾಯಕ ಕೊಟ್ಟ ಕಾರಣ ಹೀಗಿದೆ: ಬಿಗ್​ ಶಾಕ್​ಗೆ ಕಾಂಗ್ರೆಸ್​ ತತ್ತರ

    VIDEO: ದಸರಾ ಹಬ್ಬಕ್ಕೆ ಹೀಗೊಂದು ‘ಬಂಪರ್​ ಕೊಡುಗೆ’: ಆರ್ಡರ್​ ಮಾಡಿದ್ದು ಡ್ರೋನ್​ ಕ್ಯಾಮೆರಾ, ಮನೆಗೆ ಬಂದದ್ದು…..

     

    PFI ಜತೆ ನಿಷೇಧಕ್ಕೆ ಒಳಗಾಗಿರೋ ಎಂಟು ಸಂಘಟನೆಗಳು ಇವೇ ನೋಡಿ: ಇನ್ಮುಂದೆ ಇವುಗಳ ಆಟ ನಡಿಯಲ್ಲ..!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts