ನನ್ನ ಸೇವೆ ಮಾಡಿ ಸದ್ಗತಿ ಪಡೆಯಿರಿ ಎಂದು ಕಾಮತೃಷೆ ತೀರಿಸಿಕೊಳ್ಳುತ್ತಿದ್ದ 'ಗುರು'ಗೆ 120 ವರ್ಷ ಜೈಲು!

selfgod
Published on

ನ್ಯೂಯಾರ್ಕ್: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಸ್ವಯಂ ಘೋಷಿತ ಗುರು 60 ವರ್ಷದ ಕಿಥ್​ ರನ್ನೀರ್​ಗೆ ಅಮೆರಿಕ ನ್ಯಾಯಾಲಯ 120 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ನ್ಯೂಯಾರ್ಕ್​ನಲ್ಲಿ 'ನೆಕ್ಸಿವಿಮ್‌' ಹೆಸರಿನ ಮಾರ್ಗದರ್ಶನ ಮತ್ತು ತರಬೇತಿ ತಂಡ ಕಟ್ಟಿಕೊಂಡಿದ್ದ ಈತನ ಮಾರ್ಗದರ್ಶನಕ್ಕಾಗಿ ಅನೇಕ ಮಂದಿ ಬರುತ್ತಿದ್ದರು. ಇವರ ಪೈಕಿ ಮಹಿಳೆಯರೂ ಸೇರಿದ್ದರು. ಮಾರ್ಗದರ್ಶನ ನೀಡುವ ನೆಪದಲ್ಲಿ ಬಂದವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಈತ.

ತನ್ನನ್ನು ಗ್ರ್ಯಾಂಡ್‌ ಮಾಸ್ಟರ್‌ ಎಂದು ಕರೆದುಕೊಳ್ಳುತ್ತಿದ್ದ ಕಿಥ್‌, ಮಹಿಳಾ ಹಿಂಬಾಲಕರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲದೇ, ತನ್ನ ಸೇವೆ ಮಾಡಿದರೆ ಎಲ್ಲ ರೀತಿಯ ಸಾಧನೆ ಮಾಡಬಹುದು, ಜೀವನದಲ್ಲಿ ಸಾಧನೆ ಮಾಡಬೇಕು ಎಂದರೆ ನನ್ನ ಸೇವೆ ಮಾಡಬೇಕು ಎನ್ನುತ್ತಿದ್ದ. ಈತನ ಮಾತಿನಿಂದ ಬ್ರೇನ್​ವಾಷ್​ ಆಗುತ್ತಿದ್ದ ಮಹಿಳೆಯರು ಅವನು ಹೇಳಿದಂತೆ ನಡೆದುಕೊಳ್ಳುತ್ತಿದ್ದರು. ನಂತರ ಅವರ ಜತೆ ಅಶ್ಲೀಲವಾಗಿ ವರ್ತಿಸುತ್ತಿದ್ದ ಕಿಥ್​, ಮಹಿಳೆಯರ ಜತೆಗಿರುವ ತನ್ನ ಫೋಟೊಗಳನ್ನು ಚಿತ್ರಿಸಿಕೊಂಡು ಬೆದರಿಕೆ ಕೂಡ ಹಾಕುತ್ತಿದ್ದ.

ಈತನ ಹಿಂಬಾಲಕರಾಗಿದ್ದ 13 ಮಹಿಳೆಯರು ಬ್ರೂಕ್ಲಿನ್‌ ಕೋರ್ಟ್‌ನಲ್ಲಿ ತಾವು ಅನುಭವಿಸಿದ ಕಿರುಕುಳವನ್ನು ವಿವರಿಸಿ ಆರೋಪ ಹೊರಿಸಿದ್ದರು. ಇದರ ಹೊರತಾಗಿ 90ಕ್ಕೂ ಹೆಚ್ಚು ಸಂತ್ರಸ್ತರು ಖುದ್ದಾಗಿ ಕೀಥ್‌ ವಿರುದ್ಧ ನ್ಯಾಯಾಧೀಶ ನಿಕೋಲಸ್‌ ಗರೌಫಿಸ್‌ ಅವರಿಗೆ ಪತ್ರ ಬರೆದಿದ್ದರು. ಇವುಗಳನ್ನು ಆಧರಿಸಿ ನ್ಯಾಯಾಲಯ ಶಿಕ್ಷೆ ಘೋಷಿಸಿದೆ.

1998ರಲ್ಲಿ ನ್ಯೂಯಾರ್ಕ್​ನಲ್ಲಿ ಸ್ಥಾಪನೆಯಾದ ನೆಕ್ಸಿವಿಮ್‌ನಲ್ಲಿ ಅನೇಕ ಯುವತಿಯರು ಸಿಲುಕಿ ನರಳಾಡುತ್ತಿರುವ ಬಗ್ಗೆ ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಸಾಕ್ಷ್ಯಚಿತ್ರಗಳು ಕೂಡ ಪ್ರಸಾರವಾಗಿದ್ದವು. ಇದು ಭಾರಿ ವಿವಾದ ಸೃಷ್ಟಿಸಿತ್ತು. ಆದರೆ ಆತನ ವಿರುದ್ಧ ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನೆಲೆಯಲ್ಲಿ ಬಂಧಿಸಲು ಸಾಧ್ಯವಾಗಿರಲಿಲ್ಲ. ಇದೀಗ ಮಹಿಳೆಯರೇ ಮುಂದೆಬಂದು ದೂರು ದಾಖಲು ಮಾಡಿದ್ದರಿಂದ ಬಂಧಿಸಲಾಗಿತ್ತು.

ಈತನ ಭಯಾನಕ ಕೃತ್ಯಗಳನ್ನು ಗಮನಿಸಿದ ಕೋರ್ಟ್​ 120 ವರ್ಷಗಳ ಶಿಕ್ಷೆ ವಿಧಿಸಿದೆ. ಇದರ ಅರ್ಥ, 60 ವರ್ಷದ ಈತ ಸದ್ಯ ಸಾಯುವವರೆಗೂ ಕೋರ್ಟ್​ನಲ್ಲಿ ಇರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net