ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಯ್ತು ಸಮೋಸಾ!

samosa
Published on

ಅನ್ನೂಪುರ (ಮಧ್ಯಪ್ರದೇಶ): ಸಮೋಸಾ ಬೆಲೆ ಹೆಚ್ಚಳವಾಗಿದ್ದಕ್ಕೆ ಅಂಗಡಿಯವ ಹಾಗೂ ಖರೀದಾರನ ನಡುವೆ ಉಂಟಾದ ಜಗಳ ತಾರರಕ್ಕೇರಿ, ಕೊನೆಗೆ ಖರೀದಿದಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋದ ಘಟನೆ ಮಧ್ಯಪ್ರದೇಶದ ಅನ್ನೂಪುರದಲ್ಲಿ ನಡೆದಿದೆ.

ಇಲ್ಲಿಯ ಅಮರ್‌ಕಾಂತಕ್‌ನ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆ ಜೈಸ್ವಾಲ್​ ಎಂಬಾತ ತಮ್ಮ ಮೂವರು ಸ್ನೇಹಿತರ ಜತೆಗೆ ಸಮೋಸಾ ತಿನ್ನಲು ಅಂಗಡಿಗೆ ಹೋಗಿದ್ದಾರೆ. ಈ ಮೊದಲು 15 ರೂಪಾಯಿಗೆ ಸಿಗುತ್ತಿದ್ದ ಎರಡು ಸಮೋಸಾಗಳ 20 ರೂಪಾಯಿಗೆ ಏರಿಸಲಾಗಿದೆ. ಆದ್ದರಿಂದ ರೇಟ್‌ ಹೆಚ್ಚಾಗಿರುವ ಬಗ್ಗೆ ಅಂಗಡಿಯಾತ ಹೇಳಿದ್ದಾನೆ.

ಇದರಿಂದ ಕೋಪಗೊಂಡ ಜೈಸ್ವಾಲ್‌ ಅಂಗಡಿಯವನ ಜತೆ ಜಗಳಕ್ಕಿಳಿದಿದ್ದಾನೆ. ಈ ವಿಷಯದಲ್ಲಿ ಇಬ್ಬರ ನಡುವೆ ಜಗಳವಾಗಿದ್ದು, ನಂತರ ಅದು ವಿಕೋಪಕ್ಕೆ ಹೋದಾಗ ಅಂಗಡಿಯಾತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆಗಾಗಿ ಜೈಸ್ವಾಲ್ ನನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.

ತನ್ನ ಬಗ್ಗೆ ದೂರು ನೀಡಿದ ಕಾರಣಕ್ಕೆ ಜೈಸ್ವಾಲ್‌ ಕೆಂಡಾಮಂಡಲವಾಗಿದ್ದು, ಪುನಃ ಅಂಗಡಿಯವನ ಬಳಿ ಜಗಳ ಮಾಡಿದ್ದಾನೆ. ಪೊಲೀಸರು ವಿನಾ ಕಾರಣ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಕೂಗಾಡಿ ಅಲ್ಲಿಯೇ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ! ಸ್ಥಳೀಯರು ಬೆಂಕಿ ಆರಿಸಿ, ಆಸ್ಪತ್ರೆಗೆ ಸಾಗಿಸಿದರೂ, ಗಂಭೀರವಾಗಿ ಗಾಯಗೊಂಡಿದ್ದರಿಂದ ಜೈಸ್ವಾಲ್​ ಮೃತಪಟ್ಟಿದ್ದಾನೆ.

ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದು, ಸಂಬಂಧಿಕರು ಪೊಲೀಸರು ಮತ್ತು ಅಂಗಡಿಯವನಿಂದ ಕಿರುಕುಳಕ್ಕೊಳಗಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದು, ನ್ಯಾಯ ಕೊಡಿಸಿ ಎಂದು ಗೋಗರೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net