

ಅಲಿಗಢ: ಇದು ಅಪ್ರಾಪ್ತೆಯೊಬ್ಬಳ ಪ್ರೇಮ ಕಥೆ. ಉತ್ತರ ಪ್ರದೇಶದ ಅಲಿಗಢದ ಖುಷಿ ಮತ್ತು ವರುಣ್ ಎಂಬ ಜೋಡಿ ಪ್ರೇಮಪಾಶದಲ್ಲಿ ಸಿಲುಕಿ ಅನುಭವಿಸಬಾರದ್ದನ್ನೆಲ್ಲಾ ಅನುಭವಿಸಿ ಕೊನೆಗೆ ಪ್ರೀತಿಯೇ ಗೆದ್ದ ಘಟನೆಯಿದು.
15 ವರ್ಷದ ಖುಷಿಗೆ ವರುಣ್ ಎಂಬಾತನ ಜತೆ ಪ್ರೀತಿಯಾಗಿತ್ತು. ಆದರೆ ಇನ್ನೂ ಅಪ್ರಾಪ್ತೆಯಾಗಿರುವ ಕಾರಣ, ಯಾರೂ ಈ ಮದುವೆಗೆ ಒಪ್ಪುವುದಿಲ್ಲ ಎಂದು ತಿಳಿದಿತ್ತು. ವಿಷಯ ತಿಳಿದು ಖುಷಿಯ ಪಾಲಕರೂ ಕೆಂಡಾಮಂಡಲರಾದರು. ಇದೇ ಕಾರಣಕ್ಕೆ ಖುಷಿ ಮತ್ತು ವರುಣ್ ಮನೆ ಬಿಟ್ಟು ಪರಾರಿಯಾಗಿದ್ದರು.
ಆದರೆ, ಪೊಲೀಸ್ ಕಂಪ್ಲೇಂಟ್ ನೀಡಿರುವ ಖುಷಿಯ ಪಾಲಕರು ಇವರನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದರು. ಇಬ್ಬರೂ ಪ್ರೀತಿಸುತ್ತಿದ್ದಾರೆ ಎಂದು ತಿಳಿದಿದ್ದರೂ ವರುಣ್ ವಿರುದ್ಧ ಅತ್ಯಾಚಾರ ಮತ್ತು ಅಪಹರಣ ಕೇಸ್ ದಾಖಲು ಮಾಡಿದರು. ಖುಷಿ ಎಷ್ಟೇ ಗೋಗರೆದರೂ ಪಾಲಕರು ಹಾಕಿದ ಕೇಸ್ ಗೆದ್ದಿತು. ವರುಣ್‌ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದರು. ಇನ್ನೂ 15 ವರ್ಷ ತನಗೆ. ಅಪ್ರಾಪ್ತೆಯಾಗಿರುವ ಕಾರಣ ಏನೂ ಮಾಡಲು ಸಾಧ್ಯವಿಲ್ಲ ಎಂದು ಅರಿತ ಖುಷಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ವರುಣ್‌ನನ್ನೇ ತಾನು ಮದುವೆಯಾಗುವುದಾಗಿ ಪಟ್ಟು ಹಿಡಿದಳು. ಆದರೆ ಆತನ ಜತೆ ಮದುವೆ ದೂರದ ಮಾತು, ಅವನೊಂದಿಗೆ ಮಾತನಾಡಿದರೂ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪಾಲಕರು ಬೆದರಿಕೆ ಹಾಕಿದರು.
15 ವರ್ಷದ ಈ ಬಾಲಕಿ ಮೌನಕ್ಕೆ ಜಾರಿದಳು. ಅಪ್ಪ- ಅಮ್ಮ ಹೇಳಿದಂತೆಯೇ ಕೇಳುವುದಾಗಿ ಹೇಳಿದಳು. ಮೂರು ವರ್ಷ ಪ್ರಿಯತಮನ ಕನಸು ಕಾಣುತ್ತಲೇ ಕಳೆದಳು ಖುಷಿ. ಆದರೆ ಇದನ್ನು ಪಾಲಕರ ಎದುರು ತೋರಿಸುವಂತಿರಲಿಲ್ಲ. ಆದ್ದರಿಂದ ಏನೂ ಮಾತನಾಡದೆ ಮೂರು ವರ್ಷ ಅಂದರೆ ತನಗೆ 18 ವರ್ಷ ಆಗುವವರೆಗೆ ಕಾದಳು. ಆತನನ್ನು ಮಗಳು ಮರೆತಳು ಎಂದು ಪಾಲಕರು ಸಂತಸದಿಂದ ಇದ್ದರು.
ಆದರೆ ಖುಷಿಗೆ ಯಾವಾಗ 18 ತುಂಬಿತೋ ತಡಮಾಡಲಿಲ್ಲ. ಕೂಡಲೇ ಮಹಿಳಾ ಆಯೋಗದ ಸಹಾಯದಿಂದ ಕೋರ್ಟ್ ಬಾಗಿಲು ತಟ್ಟಿದಳು. ತನ್ನೆಲ್ಲಾ ಕಥೆಯನ್ನು ಹೇಳಿದ ಆಕೆ ಪ್ರೇಮಿ ಬಿಡುಗಡೆ ಮಾಡುವಂತೆ ಮನವಿ ಮಾಡಿದಳು. ಯುವತಿಯ ಮಾತನ್ನು ಕೇಳಿದ ಕೋರ್ಟ್ ಕೂಡ ಈಕೆಯ ಪ್ರೇಮಕ್ಕೆ ತಲೆಬಾಗಿತು. ಆಕೆಯ ಪರವಾಗಿ ತೀರ್ಪು ನೀಡಿತು. ವರುಣನಿಗೆ ಬಿಡುಗಡೆಯಾಯಿತು. ನಂತರ ಖುಷಿ ಮತ್ತು ವರುಣ್ ಕುಟುಂಬದ ಸದಸ್ಯರ ವಿರೋಧದ ನಡುವೆಯೂ ಸಮೀಪವಿರುವ ಶ್ರೀ ವರ್ಷನಿ ದೇವಸ್ಥಾನಕ್ಕೆ ತೆರಳಿ ಹಿಂದೂ ಪದ್ಧತಿಗಳ ಪ್ರಕಾರ ಮದುವೆಯಾಗಿದ್ದಾರೆ.