

ಮುಂಬೈ: ಇಂಟೀರಿಯರ್ ಡಿಸೈನರ್ ಒಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರಿಪಬ್ಲಿಕ್ ಟಿ.ವಿ.ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿ ಸುಪ್ರೀಂಕೋರ್ಟ್ನಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಛೀಮಾರಿ ಹಾಕಿಸಿಕೊಂಡು ತಿಂಗಳುಗಳೇ ಕಳೆದಿವೆ. ಮಹಾರಾಷ್ಟ್ರ ಸರ್ಕಾರದ ಕೆಲವೊಂದು ನಿಯಮಗಳ ವಿರುದ್ಧ ಸತತ ಪ್ರಸಾರ ಮಾಡುತ್ತಿರುವ ಕಾರಣ, ಅರ್ನಬ್ ಅವರನ್ನು ಮುಖ್ಯಮಂತ್ರಿಗಳ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೋರ್ಟ್ ಕೂಡ ಈ ನಡೆಯನ್ನು ತೀವ್ರವಾಗಿ ಖಂಡಿಸಿತ್ತು.
ಇದರ ಬೆನ್ನಲ್ಲೇ ಇದೀಗ ಇನ್ನೊಂದು ಹೆಜ್ಜೆ ಇಟ್ಟಿರುವ ಸರ್ಕಾರ, ಇದೇ ಟಿ.ವಿಯ ಮುಖ್ಯ ಕಾರ್ಯ ನಿರ್ವಹಣಾಕಾರಿ ವಿಕಾಸ್ ಕಾಂಚನ ದಾನಿ ಅವರನ್ನು ಬಂಧಿಸಿದೆ. ನಕಲಿ ಟಿ.ಆರ್.ಪಿಗೆ ಸಂಬಂಧಿಸಿದಂತೆ ಇದಾಗಲೇ ಅರ್ನಬ್ ಗೋಸ್ವಾಮಿ ಅವರ ವಿರುದ್ಧವೂ ಕೇಸ್ ದಾಖಲಾಗಿದ್ದು, ಅದಿನ್ನೂ ತನಿಖಾ ಹಂತದಲ್ಲಿದ್ದು, ಇದೀಗ ವಿಕಾಸ್ ಅವರನ್ನು ಬಂಧಿಸಲಾಗಿದೆ.
ಬ್ರಾಡ್‍ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹನ್ಸಾ ರಿಸರ್ಚ್ ಏಜೆನ್ಸಿ ಮುಖಾಂತರ ದೂರು ನೀಡಿದ್ದು, ಕೆಲವು ಚಾನೆಲ್‍ಗಳು ಟಿಆರ್ಪಿಯನ್ನು ತಿರುಚಿವೆ ಎಂದು ಆರೋಪಿಸಲಾಗಿದೆ. ಕೆಲವು ಕುಟುಂಬಗಳಿಗೆ ಹಣ ನೀಡಿ ನಿರಂತರವಾಗಿ ಟಿವಿ ಆನ್ ಮಾಡಿಸಿ ಟಿಆರ್ಪಿಯನ್ನು ತಿರುಚಲಾಗಿದೆ ಎಂಬ ಆರೋಪವಿದೆ. ಬಾರ್ಕ್ ಸಂಸ್ಥೆ ನೀಡಿದ್ದ ದೂರಿನ ಪ್ರಕಾರ ಬಾಕ್ಸ್ ಸಿನಿಮಾ, ಫಕ್ತ್ ಮರಾಠಿ, ಮಹಾಮೂವಿ ಮತ್ತು ರಿಪಬ್ಲಿಕ್ ಟಿವಿಗಳು ಟಿಆರ್ಪಿ ತಿರುಚುವ ಪ್ರಯತ್ನ ನಡೆಸಿವೆ ಎಂದು ಆರೋಪಿಸಲಾಗಿದೆ.
ಮಹಾರಾಷ್ಟ್ರ ಪೊಲೀಸರು ವಿಕಾಸ್ ಅವರನ್ನು ಇಂದು ಬೆಳಗ್ಗೆ ಬಂಧಿಸಿದ್ದಾರೆ. ರಿಪಬ್ಲಿಕ್ ಮೀಡಿಯಾ ನೆಟ್‍ವರ್ಕ್‍ನ ಸಿಇಒ ವಿಕಾಸ್ ಅವರನ್ನು ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಇಂದು ಬೆಳಗ್ಗೆ ಕ್ರೈಮ್ ಇಂಟಲಿಜೆನ್ಸಿ ಘಟಕದ ಪೊಲೀಸರು ಬಂಧಿಸಿದ್ದು, ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಬಿಜೆಪಿಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಕಿಡಿ ಕಾರಿರುವ ಬಿಜೆಪಿ ಸಂಸದೆ ಮತ್ತು ವಕೀಲ ಮೀನಾಕ್ಷಿ ಲೇಖಿ ವಿಕಾಸ್ ಅವರನ್ನು ಬಂಧಿಸಿರುವ ಹಿಂದಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದಾರೆ. ಟಿಆರ್ಪಿ ತಿರುಚುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್ ಅವರು ಮುಂಬೈ ಪೊಲೀಸರೊಂದಿಗೆ ಸಹಕರಿಸುತ್ತಿದ್ದಾರೆ. ಹೀಗಿರುವಾಗಿ ಅವರನ್ನು ಬಂಧಿಸುವ ಅಗತ್ಯವೇನು ಎಂದು ಪ್ರಶ್ನಿಸಿದ್ದಾರೆ.