

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ್ ದಾಸ್ ಅವರಿಗೆ ಕರೊನಾ ಸೋಂಕು ದೃಢಪಟ್ಟಿದೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ನನಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಯಾವುದೇ ರೀತಿಯ ರೋಗ ಲಕ್ಷಣಗಳು ಇಲ್ಲ. ಆದರೆ ಕರೊನಾ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ನಾನೀಗ ಹೋಮ್ ಐಸೋಲೇಷನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಐಸೋಲೇಷನ್ನಲ್ಲಿ ಇದ್ದುಕೊಂಡೇ ನಾನು ಪ್ರತಿದಿನ ಕಾರ್ಯ ನಿರ್ವಹಿಸುವುದಕ್ಕೆ ಶಕ್ತನಾಗಿದ್ದೇನೆ. ಆರ್ ಬಿಐಗೆ ಸಂಬಂಧಿಸಿದ ಕೆಲಸ ಕಾರ್ಯಗಳು ಎಂದಿನಂತೆ ನಡೆದುಕೊಂಡು ಹೋಗುತ್ತವೆ. ಅದರಲ್ಲಿ ಯಾವುದೇ ರೀತಿ ವ್ಯತ್ಯಾಸ ಆಗುವುದಿಲ್ಲ ಎಂದಿದ್ದಾರೆ.
ನಾನು ಪ್ರತ್ಯೇಕವಾಗಿದ್ದುಕೊಂಡೇ ಕಚೇರಿಯ ಕೆಲಸ-ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ. ವಿಡಿಯೋ ಕಾನ್ಫರೆನ್ಸ್ ಮತ್ತು ದೂರವಾಣಿ ಮೂಲಕ ಆರ್ಬಿಐ ಉಪ ಗವರ್ನರ್ ಮತ್ತು ಉನ್ನತಾಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾರ್ಯನಿರ್ವಹಿಸುತ್ತಿದ್ದೇನೆ ಎಂದಿದ್ದಾರೆ. ಕಚೇರಿಯ ಕೆಲಸ-ಕಾರ್ಯಗಳಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲ ಎಚ್ಚರದಿಂದ ಇದೆ. ಕೂಡಲೇ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಶಕ್ತಿಕಾಂತ್ ಮನವಿ ಮಾಡಿಕೊಂಡಿದ್ದಾರೆ.