ಸೋನಿಯಾ, ಮಮತಾ, ಶರದ್​ ಪವಾರ್​ಗೆ ಕರೆ ಮಾಡಿದ ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

draupadi
Published on

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗಾಗಿ ಇಂದು ನಾಮಪತ್ರ ಸಲ್ಲಿಸಿರುವ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಮಾತನಾಡಿದ್ದು, ಅವರ ಪಕ್ಷಗಳಿಂದ ಬೆಂಬಲವನ್ನು ಕೋರಿದ್ದಾರೆ. ಮುರ್ಮ ಅವರು ಜಾರ್ಖಂಡ್‌ನ ಮಾಜಿ ರಾಜ್ಯಪಾಲರು ಹಾಗೂ ಬುಡಕಟ್ಟು ಜನಾಂಗದ ನಾಯಕಿ.

ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ದ್ರೌಪದಿ ಮುರ್ಮು ಇಂದು (ಶುಕ್ರವಾರ) ಚುನಾವಣಾಧಿಕಾರಿ ಪಿ.ಸಿ ಮೋದಿ ಅವರಿಗೆ ನಾಮಪತ್ರಗಳನ್ನು ಸಲ್ಲಿಸಿದರು. ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಪಿಯೂಷ್ ಗೋಯಲ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್, ಬಿಎಸ್ ಬೊಮ್ಮಾಯಿ, ಭೂಪೇಂದ್ರ ಪಟೇಲ್, ಹಿಮಂತ ಬಿಸ್ವಾ ಶರ್ಮಾ, ಪುಷ್ಕರ್ ಸೇರಿದಂತೆ ಹಲವು ಮುಖ್ಯಮಂತ್ರಿಗಳು ಮುರ್ಮು ಅವರ ಜತೆಯಲ್ಲಿದ್ದರು.

ನಂತರ ಪ್ರತಿಪಕ್ಷಗಳ ಮೂವರು ಪ್ರಮುಖ ನಾಯಕರಿಗೆ ದೂರವಾಣಿ ಕರೆಮಾಡಿ, ತಮ್ಮನ್ನು ಬೆಂಬಲಿಸುವಂತೆ ದ್ರೌಪದಿ ಕೋರಿದರು. ಇದಕ್ಕೆ ಪ್ರತಿಯಾಗಿ ಮೂವರು ನಾಯಕರು ಕೂಡಾ ಮುರ್ಮು ಅವರಿಗೆ ಶುಭ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೂನ್​ 21 ರಂದು ಬಿಜೆಪಿ, ಎನ್​ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮರ್ಮು ಅವರ ಹೆಸರನ್ನು ಘೋಷಿಸಿತ್ತು. 64 ವರ್ಷದ ಮರ್ಮು ಅವರು ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ 2000 ವರ್ಷದಿಂದ 2004ರವರೆಗೆ ಸಚಿವರಾಗಿ ಹಾಗೂ 2015 ರಿಂದ 2021ರವರೆಗೆ ಜಾರ್ಖಂಡ್​ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದಾರೆ.

ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, 21ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ. ಆಯ್ಕೆಯಾಗುವ ಹೊಸ ರಾಷ್ಟ್ರಪತಿ ಅವರು ಜುಲೈ 25ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ. ದ್ರೌಪದಿ ಮುರ್ಮು ಚುನಾವಣೆಯಲ್ಲಿ ಗೆದ್ದರೆ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ ಮೊದಲ ಆದಿವಾಸಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ದ್ರೌಪದಿ ಮುರ್ಮು ಹಿನ್ನೆಲೆ: ದ್ರೌಪದಿ ಮುರ್ಮು ಅವರು ಜೂನ್ 20, 1958 ರಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಬಿರಂಚಿ ನಾರಾಯಣ ಟುಡು. ಸಂತಾಲ್ ಬುಡಕಟ್ಟು ಜನಾಂಗಕ್ಕೆ ಸೇರಿದರಾದ ದ್ರೌಪದಿ, ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾದರು.1997 ರಲ್ಲಿ ರಾಯರಂಗಪುರ ಪುರಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದ ನಂತರ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದೇ ವರ್ಷ ಅವರು ರಾಯರಂಗಪುರ ಪುರಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾದರು.

2000 ಮತ್ತು 2004 ರಲ್ಲಿ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈರಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. BJD-BJP ಮೈತ್ರಿ ಸಮಯದಲ್ಲಿ ಮಾರ್ಚ್ 6, 2000 ರಿಂದ ಆಗಸ್ಟ್ 6, 2002 ರವರೆಗೆ ವಾಣಿಜ್ಯ ಮತ್ತು ಸಾರಿಗೆ ಇಲಾಖೆಯ ರಾಜ್ಯ ಸಚಿವರಾಗಿ ಮತ್ತು ಆಗಸ್ಟ್ 6, 2002 ರಿಂದ ಮೇ 16, 2004 ರವರೆಗೆ ಮೀನುಗಾರಿಕೆ ಇಲಾಖೆ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದಾರೆ . ಜೊತೆಗೆ ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ ಕೆಲಸ ಮಾಡಿದ ಅನುಭವವಿದೆ.

ದೇಶದಲ್ಲಿ ಆದಿವಾಸಿ ಸಮುದಾಯಗಳ ಜನಸಂಖ್ಯೆ 12 ಕೋಟಿಗೂ ಹೆಚ್ಚಿದೆ. ಇತರ ಸಮುದಾಯಗಳಿಗೆ ಹೋಲಿಸಿದರೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಆದಿವಾಸಿಗಳ ಭಾಗವಹಿಸುವುದು ತುಂಬಾ ಕಡಿಮೆ. ಹೀಗಾಗಿ, ದ್ರೌಪದಿ ಮುರ್ಮು ಹೆಸರನ್ನು ಘೋಷಣೆ ಮಾಡುವ ಮೂಲಕ ಎನ್‌ಡಿಎ ತನ್ನ ಕಾರ್ಯಸೂಚಿಯಲ್ಲಿ ಸಾಮರಸ್ಯ ಮತ್ತು ಸರ್ವವ್ಯಾಪಿ ಸಮಾಜದ ಪರಿಕಲ್ಪನೆಯೇ ಪ್ರಧಾನ ಎಂಬ ಸಂದೇಶವನ್ನು ನೀಡಲು ಪ್ರಯತ್ನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net