

ಮುಂಬೈ: ಶಿವಸೇನೆಯ ಮುಖಂಡ ಏಕನಾಥ್ ಶಿಂಧೆ ಕೊಟ್ಟಿರುವ ಭರ್ಜರಿ ಏಟಿಗೆ ಮಹಾರಾಷ್ಟ್ರ ಸರ್ಕಾರ ಅಲ್ಲೋಲ ಕಲ್ಲೋಲವಾಗಿದೆ. ಯಾವುದೇ ಕ್ಷಣದಲ್ಲಿಯೂ ಸರ್ಕಾರ ಪತನವಾಗುವ ಸಾಧ್ಯತೆ ಇದೆ. ಇನ್ನೊಂದೆಡೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಕರೆದಿರುವುದನ್ನು ಪ್ರಶ್ನಿಸಿ ದೇಶದ ಕಾಂಗ್ರೆಸ್ ಮುಖಂಡರೆಲ್ಲಾ ಭಾರಿ ಪ್ರತಿಭಟನೆ ಮುಂದುವರೆಸಿದ್ದಾರೆ. ಇದರ ನಡುವೆಯೇ ಮಹಾರಾಷ್ಟ್ರದ ಮೈತ್ರಿಕೂಟದ ಭಾಗವಾಗಿರುವ ಪ್ರಿಯಾಂಕಾ ಗಾಂಧಿ ಮಾಲ್ಡೀವ್ಸ್ನತ್ತ ಪ್ರಯಾಣ ಬೆಳೆಸಿದ್ದು, ಇದೀಗ ಭಾರಿ ಟೀಕೆಗೆ ಗುರಿಯಾಗಿದೆ.
ಮಹಾರಾಷ್ಟ್ರದಲ್ಲಿ ಸದ್ಯ ಇರುವುದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಸರ್ಕಾರ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂಥ ಬಿಕ್ಕಟ್ಟಿನ ಸ್ಥಿತಿಯಲ್ಲಿ ಇರುವಾಗ ಈ ರೀತಿ ವಿದೇಶಕ್ಕೆ ಹೊರಟಿರುವುದು ಏಕೆ ಎಂಬ ಬಗ್ಗೆ ಚರ್ಚೆ ಶುರುವಾಗಿದೆ.
ಮುಂಬೈನಲ್ಲಿ ಕೆಲವು ಗಂಟೆ ಇದ್ದರೂ ಯಾವುದೇ ರಾಜಕೀಯ ನಾಯಕರನ್ನು ಭೇಟಿ ಮಾಡದೆಯೇ ಮಾಲ್ಡೀವ್ಸ್ ವಿಮಾನ ಏರಿದ್ದಾರೆ ಎಂದು ಕೆಲವು ವರದಿಗಳು ಹೇಳಿದ್ದರೆ, ನಾಯಕರನ್ನು ಭೇಟಿ ಮಾಡಿ ಹೋಗಿದ್ದಾರೆ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ.
ಅದೇನೇ ಇದ್ದರೂ ಇಷ್ಟು ದಿನ ರಾಹುಲ್ ಗಾಂಧಿಯವರ ವಿದೇಶ ಪ್ರಯಾಣದ ಬಗ್ಗೆ ಕೇಳಿಬರುತ್ತಿದ್ದ ಟೀಕೆಗಳು ಈಗ ಪ್ರಿಯಾಂಕಾನತ್ತ ತಿರುಗಿದೆ. ಜಾರಿ ನಿರ್ದೇಶನಾಲಯವು ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರಿಗೆ ನೋಟಿಸ್ ನೀಡಿರುವುದಕ್ಕೆ ಎಲ್ಲಾ ಕಾಂಗ್ರೆಸ್ ಮುಖಂಡರು ಬೀದಿಗಿಳಿದಿದ್ದರೆ, ಇತ್ತ ಪ್ರಿಯಾಂಕಾ ಮಾತ್ರ ಈ ಹೊತ್ತಿನಲ್ಲಿ ವಿದೇಶಕ್ಕೆ ತೆರಳಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಮುಖಂಡ ಅಮಿತ್ ಮಾಳ್ವಿಯಾ ಹೇಳಿದ್ದಾರೆ.
ಮಾಲ್ಡೀವ್ಸ್ನಲ್ಲಿರುವ ತಮ್ಮ ಪುತ್ರಿಯನ್ನು ಪ್ರಿಯಾಂಕಾ ನೋಡಲು ಹೋಗುತ್ತಿದ್ದಾರೆ ಎಂದು ಇನ್ನೊಂದು ಮೂಲಗಳು ಹೇಳಿವೆ. ಪ್ರಿಯಾಂಕಾ ಪುತ್ರಿ 20 ವರ್ಷದವಳಾಗಿದ್ದು, ಮಾಲ್ಡೀವ್ಸ್ನಲ್ಲಿ ಡೈವಿಂಡ್ ಸ್ಕೂಲ್ನಲ್ಲಿ ತರಬೇತಿ ನೀಡುತ್ತಿದ್ದಾಳೆ. ಅವಳನ್ನು ನೋಡಲು ಪ್ರಿಯಾಂಕಾ ಹೋಗಿದ್ದಾರೆ ಎನ್ನಲಾಗಿದೆ. ಅವರು ಜೂನ್ 30ರಂದು ವಾಪಸ್ ಬರುತ್ತಾರೆ ಎನ್ನಲಾಗಿದೆ.