'ಸಾವರ್ಕರ್‌ರ ಬಿಡುಗಡೆಗೆ ಮನವಿ ಮಾಡಿದ್ದು ಗಾಂಧೀಜಿ- ಕ್ಷಮಾದಾನದ ಅರ್ಜಿ ಸಲ್ಲಿಸಲು ಹೇಳಿದ್ದೂ ಅವರೇ’

savarkar
Published on

ನವದೆಹಲಿ: ಅಂದು ವೀರ ಸಾವರ್ಕರ್‌ ಅವರಂತೆ ನೇರ, ದಿಟ್ಟ, ನಿಷ್ಠುರವಾಗಿ ಮಾತನಾಡುವವರು ಇನ್ನೂ ಸ್ವಲ್ಪ ಜನ ಇದ್ದಿದ್ದರೆ ಇಂದು ನಮ್ಮ ದೇಶ ಎರಡು ವಿಭಜನೆ ಆಗುವ ಮಾತೇ ಬರುತ್ತಿರಲಿಲ್ಲ. ಭಾರತದ ಐಕಾನ್‌ ಆಗಿರುವ ಇಂಥ ವೀರ ಸಾವರ್ಕರ್‌ ಅವರ ಕುರಿತಂತೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿರುವುದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಅಂಬೇಡ್ಕರ್‌ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಾರ್ವಕರ್‌ ಕುರಿತಾದ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಅವರು ಮಾತನಾಡಿದರು. ಉದಯ್ ಮಹೂರ್ಕರ್ ಮತ್ತು ಚಿರಾಯು ಪಂಡಿತ್ ಅವರು ಬರೆದಿರುವ ‘ವೀರ ಸಾವರ್ಕರ್: ವಿಭಜನೆಯನ್ನು ತಡೆಯಬಹುದಾದ ವ್ಯಕ್ತಿ’ ಪುಸ್ತಕ ಇದಾಗಿದೆ.

ಸಾವರ್ಕರ‌ ಅವರು ಹಿಂದುತ್ವದ ಐಕಾನ್‌ ಕೂಡ. ಅವರನ್ನು ಅಂಡಮಾನ್‌ ಜೈಲಿನಲ್ಲಿ ಇರಿಸಿದ್ದಾಗ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದನ್ನೇ ದೊಡ್ಡ ವಿಷಯ ಮಾಡಿ ಆಡಿಕೊಳ್ಳಲಾಗುತ್ತಿದೆ. ಆದರೆ ನೈಜ ಚಿತ್ರಣವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗುತ್ತಿದೆ. ಇವರು ಜೈಲಿನಲ್ಲಿ ಇದ್ದಾಗ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿ ಸಲ್ಲಿಸುವಂತೆ ಹೇಳಿದವರು ಗಾಂಧೀಜಿ. ಅಷ್ಟಕ್ಕೂ, ಜೈಲಿನಲ್ಲಿ ಇರುವ ಕೈದಿಗಳು ಈ ರೀತಿ ಕ್ಷಮಾದಾನದ ಅರ್ಜಿ ಸಲ್ಲಿಸುವುದು ಹೊಸ ವಿಷಯವಲ್ಲ. ಅದೇ ರೀತಿ ನೀವೂ ಮಾಡಿ ಎಂದು ಸಾವರ್ಕರ್‌ ಅವರಿಗೆ ಹೇಳಿದ್ದರು ಗಾಂಧೀಜಿ ಎಂದು ರಾಜನಾಥ್‌ ಸಿಂಗ್‌ ವಿವರಿಸಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಸಾವರ್ಕರ್‌ ನೀಡಿದ ಕೊಡುಗೆಗಳನ್ನು, ಅವರ ಸಿದ್ಧಾಂತಗಳು ಬಹು ಅಮೂಲ್ಯವಾದದ್ದು. ಇದನ್ನು ಮರೆತು ಅವರನ್ನು ನಿಂದನೆ ಮಾಡಲಾತ್ತಿದೆ. ಇನ್ನು ಮುಂದೆ ಸಹಿಸಲಾಗದು ಎಂದರು. ಗುಲಾಮಗಿರಿಯ ಸಂಕೋಲೆಯನ್ನು ಮುರಿಯಲು ಜನರಿಗೆ ಪ್ರೇರಣೆ ನೀಡಿದವರು ಸಾವರ್ಕರ್‌. ಮಹಿಳಾ ಹಕ್ಕುಗಳು ಸೇರಿದಂತೆ ಇತರ ಸಾಮಾಜಿಕ ಸಮಸ್ಯೆಗಳ ನಡುವೆ ಅಸ್ಪೃಶ್ಯತೆಯ ವಿರುದ್ಧ ಆಂದೋಲನ ಮಾಡಿದರು. ಆದರೆ ಸಾರ್ವಕರ್‌ ಅವರು ದೇಶದ ಸಾಂಸ್ಕೃತಿಕ ಏಕತೆಗಾಗಿ ನೀಡಿದ ಕೊಡುಗೆಯನ್ನು ಕಡೆಗಣಿಸುತ್ತಿರುವುದು ದುರದೃಷ್ಟಕರ ಎಂದರು.

‘ಸಾರ್ವಕರ್‌ ಹಿಂದುತ್ವದ ಮೇಲೆ ನಂಬಿಕೆ ಇದ್ದವರು. ಆದರೆ ಅವರು ವಾಸ್ತವವಾದಿ. ಒಂದೇ ರೀತಿಯ ಸಂಸ್ಕೃತಿ ಇರಬೇಕು ಎಂದು ನಂಬಿದವರು ಅವರು. ಜನರಲ್ಲಿ ಏಕತೆ ಇರಬೇಕಾದರೆ ಸಂಸ್ಕೃತಿಯಲ್ಲಿಯೂ ಏಕತೆ ಇರಬೇಕು ಎನ್ನುತ್ತಿದ್ದರು. ಅದರೆ ಇಂದು ನಾಝಿ ಅಥವಾ ಫಾಸಿಸ್ಟ್‌ ಎಂದು ಟೀಕೆ ಮಾಡಲಾಗುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌, ವೀರ್‌ ಸಾರ್ವಕರ್‌ ವಿರು‌ದ್ಧವಾಗಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ನಿಜವಾಗಿ ನಡೆದದ್ದು ಏನು ಎಂದು ತಿಳಿದವರೂ ಸೇರಿದಂತೆ ಇಂದು ಅವರ ಬಗ್ಗೆ ಸರಿಯಾಗಿ ಅರಿಯದವರು ಏನೇನೋ ಮಾತನಾಡುತ್ತಿದ್ದಾರೆ. ಸಾರ್ವಕರ್‌ ಜೀ ಅವರನ್ನು ಬಂಧನದಿಂದ ಮುಕ್ತಗೊಳಿಸಬೇಕು ಎಂದು ಖುದ್ದು ಗಾಂಧೀಜಿಯವರೇ ಮನವಿ ಮಾಡಿದ್ದ ವಿಷಯವನ್ನೂ ಮರೆಮಾಚಲಾಗುತ್ತಿದೆ ಎಂದು ಹೇಳಿದರು.

ಒಟ್ಟಿನಲ್ಲಿ ಒಂದು ವರ್ಗಕ್ಕೆ ಸಾವರ್ಕರ್‌ ಮತ್ತು ಆರ್‌ಎಸ್‌ಎಸ್‌ನ್ನು ಟೀಕೆ ಮಾಡುತ್ತಲೇ ಇರಬೇಕು. ಇಂದು ಸಾವರ್ಕರ್‌ ಅವರಿಗೆ ಆದಂತೆ ನಾಳೆ ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ, ಅರಬಿಂದೋ ಅವರನ್ನೂ ಟೀಕೆ ಮಾಡದಿದ್ದರೆ ಸಾಕು ಎಂದು ಭಾಗ್ವತ್‌ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net