

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್ ಗಾಂಧಿಯವರ ಖುದ್ದು ಹಾಜರಿಗೆ ಆದೇಶಿಸಿತ್ತು. ನೋಟಿಸ್ ಜಾರಿಯಾದ ಮಾರನೆಯ ದಿನವೇ ಸೋನಿಯಾ ಗಾಂಧಿ ಕೋವಿಡ್ಗೆ ತುತ್ತಾಗಿ, ಆಸ್ಪತ್ರೆ ದಾಖಲಾಗಿದ್ದರೆ, ವಿದೇಶದಲ್ಲಿದ್ದು ಟೈಂ ಕೇಳುತ್ತಲಿದ್ದ ರಾಹುಲ್ ಗಾಂಧಿ ಇಂದು ಇಡಿ ಕಚೇರಿಗೆ ಭೇಟಿ ನೀಡಿದ್ದಾರೆ.
ಈ ನಡುವೆ ತಾಯಿ-ಮಗನನ್ನು ಈ ಅಕ್ರಮ ಕೇಸ್ನಲ್ಲಿ ಪ್ರಶ್ನೆ ಮಾಡದಂತೆ ಕಾಂಗ್ರೆಸ್ ದೇಶಾದ್ಯಂತ ಭಾರಿ ಪ್ರತಿಭಟನೆ ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರ ಹಾಗೂ ಜಾರಿ ನಿರ್ದೇಶನಾಲಯ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಇವರಿಗೆ ನೋಟಿಸ್ ನೀಡಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಕೋರ್ಟ್ನಿಂದ ಜಾಮೀನಿನ ಮೇಲೆ ಇರುವ ತಾಯಿ-ಮಗ ವಿಚಾರಣೆಗೆ ಹಾಜರಾಗಲೇಬೇಕಿದೆ. ಆದರೆ ಅವರನ್ನು ವಿಚಾರಣೆಗೆ ಕರೆಯಬಾರದು ಎಂದರೆ ಹೇಗೆ ಎಂದು ಬಿಜೆಪಿ ಗರಂ ಆಗಿದೆ.
ನವದೆಹಲಿ, ಮುಂಬೈ ಸೇರಿದಂತೆ ದೇಶಾದ್ಯಂತ ಭಾರಿ ಪ್ರತಿಭಟನೆ ಕೈಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಹಲವೆಡೆಗಳಲ್ಲಿ ಸಂಘರ್ಷಕ್ಕೆ ಇಳಿದಿದ್ದಾರೆ. ಬೆಂಗಳೂರಿನಲ್ಲಿ ಕೂಡ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ಶುರುವಾಗಿದೆ. ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೈಡ್ರಾಮಾ ಮಾಡುತ್ತಿದ್ದು, ಪೊಲೀಸರ ಜತೆ ವಾಗ್ವಿವಾದಕ್ಕೆ ಇಳಿದಿದ್ದಾರೆ. ಇವರನ್ನು ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯ್ತು. ಸುರಕ್ಷತೆಯ ದೃಷ್ಟಿಯಿಂದ ಗಲಾಟೆ ಸೃಷ್ಟಿಸುವ ಕೆಲವರನ್ನು ಪೊಲೀಸರು ಮೊದಲೇ ವಶಕ್ಕೆ ಪಡೆದುಕೊಂಡಿದ್ದರು.
ಈ ನಡುವೆ ಎಐಸಿಸಿ ಕಚೇರಿಯಿಂದ ರಾಹುಲ್ ಗಾಂಧಿ ಜಾರಿ ನಿರ್ದೇಶನಾಲಯದ ಕಚೇರಿಯತ್ತ ಧಾವಿಸಿದರು. ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಜಿಂದಾಬಾದ್, ಜಿಂದಾಬಾದ್ ರಾಹುಲ್ ಗಾಂಧಿ ಜಿಂದಾಬಾದ್ ಹಾಡನ್ನು ಹಾಡುತ್ತಿದ್ದರು. ಪ್ರಿಯಾಂಕಾ ಗಾಂಧಿ ಕೂಡ ರಾಹುಲ್ ಜತೆಯಾಗಿದ್ದಾರೆ.
ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್?
ಜವಾಹರಲಾಲ್ ನೆಹರು ಮತ್ತು ಇತರ ಕೆಲವು ಸ್ವಾತಂತ್ರ್ಯ ಹೋರಾಟಗಾರರು ಜತೆಗೂಡಿ 1938ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸ್ವತಂತ್ರ ದಳದ ಕಳವಳಗಳಿಗೆ ಧ್ವನಿಯಾಗುವುದು ಇದರ ಉದ್ದೇಶವಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಾಶನದ ಈ ಪತ್ರಿಕೆಯು, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಮುಖವಾಣಿಯಾಗಿತ್ತು.
2010ರಲ್ಲಿ ಕಾಂಗ್ರೆಸ್ ಪಕ್ಷದ ಆಗಿನ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಯಂಗ್ ಇಂಡಿಯಾ ಲಿಮಿಟೆಡ್ ಸ್ಥಾಪಿಸಿದ್ದರು. ಈ ಕಂಪೆನಿಯು ಯಂಗ್ ಇಂಡಿಯಾ ಲಿಮಿಟೆಡ್ (ವೈಐಎಲ್), ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ನ ಷೇರುಗಳನ್ನು ಖರೀದಿ ಮಾಡುವಲ್ಲಿ ವಂಚನೆ ಹಾಗೂ ನಂಬಿಕೆ ದ್ರೋಹ ಎಸಗಿದೆ. ಇದರಲ್ಲಿ ಅನೇಕ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ ಎಂದು 2012ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ವಿಚಾರಣಾ ನ್ಯಾಯಾಲಯದಲ್ಲಿ ದೂರು ನೀಡಿದ್ದರು.
ಬಳಕೆಯಲ್ಲಿ ಇಲ್ಲದ ಮಾಧ್ಯಮ ಸಂಸ್ಥೆಯ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಂಡು ಸುಮಾರು 2 ಸಾವಿರ ಕೋಟಿ ರೂ ಲಾಭ ಹಾಗೂ ಆಸ್ತಿ ಸಂಪಾದಿಸಲು ಯಂಗ್ ಇಂಡಿಯಾ ಲಿ. ವಾಮಮಾರ್ಗ ಅನುಸರಿಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದ್ದು, ಜಾರಿ ನಿರ್ದೇಶನಾಲಯವು ರಾಹುಲ್ ಮತ್ತು ಸೋನಿಯಾ ಅವರಿಗೆ ನೋಟಿಸ್ ಜಾರಿ ಮಾಡಿ ಖುದ್ದು ಹಾಜರಿಗೆ ಆದೇಶಿಸಿದೆ. ಇದರ ಬೆನ್ನಲ್ಲೇ ಸೋನಿಯಾ ಗಾಂಧಿ ಅವರಿಗೆ ಕರೊನಾ ಕಾಣಿಸಿಕೊಂಡಿದೆ.